ಭಕ್ತರಿಗೆ ಶ್ರೀಭೂಲಕ್ಷ್ಮೀ ವರಾಹಸ್ವಾಮಿ ದರ್ಶನ

Oplus_0
Oplus_0
Published on

ಯಳಂದೂರು: ಪಟ್ಟಣದ ಹೃದಯ ಭಾಗದಲ್ಲಿರುವ ಶಿಥಿಲಗೊಂಡಿದ್ದ 2 ಶತಮಾನದ ಭೂ ಲಕ್ಷ್ಮೀ ವರಾಹಸ್ವಾಮಿ ದೇಗುಲವನ್ನು ಡಾ.ರಮೇಶ್ ಉಡುಪ, ಡಾ.ಶಶಿಕಲಾ ರಮೇಶ್ ದಂಪತಿ ಜೀರ್ಣೋದ್ಧಾರ ಮಾಡಿಸಿದ್ದು, ಆ.9ರಂದು ಆರಂಭವಾದ ವಿವಿಧ ಧಾರ್ಮಿಕ ಕಾರ್ಯಗಳು ಸೋಮವಾರ ಮುಕ್ತಾಯಗೊಂಡವು.

ಇಲ್ಲಿರುವ ಶ್ರೀಭೂಲಕ್ಷ್ಮೀ ವರಾಹಸ್ವಾಮಿ, ಶ್ರೀಚೆನ್ನಕೇಶವಸ್ವಾಮಿ, ಶ್ರೀಮಹಾಲಕ್ಷ್ಮೀ ಅಮ್ಮ, ಶ್ರೀಮೂಲೆ ಗಣಪತಿ, ವಿಮಾನಗೋಪುರಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ. ಇದರ ಮಹಾ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕದ ಕಾರ್ಯಕ್ರಮದ ಅಂತಿಮ ದಿನವಾದ ಸೋಮವಾರ ಸ್ವಸ್ತಿ ಪುಣ್ಯಾಹವಾಚನ, ಶಾಂತಿ ಕಳಸ ಸಂಪನ್ನ, ಸರ್ವಾಗ್ನಿ ಕುಂಡೇಷು ಮಹಾಪೂರ್ಣಾಹುತಿ, ಆಲಯ ಪ್ರದಕ್ಷಿಣೆ, ಮಹದಾಶೀರ್ವಚನ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿ ಕಳಸಾರೋಹಣ ಮಾಡಲಾಯಿತು.

ದೇವರ ದರ್ಶನ ಪಡೆದ ಭಕ್ತರು: ದೇವರ ದರ್ಶನಕ್ಕೆ ಹೊರ ರಾಜ್ಯ, ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಇಡೀ ದೇಗುಲವನ್ನು ವಿಶೇಷ ಫಲ, ಪುಷ್ಪ, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ನೆರೆದಿದ್ದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ನಾವು ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದು, ಈ ದೇಗುಲ ದರ್ಶನಕ್ಕೆ ತೆರಳಿದ್ದಾಗ ದೇಗುಲ ಶಿಥಿಲವಾಗಿರುವುದು ಗಮನಕ್ಕೆ ಬಂತು. ಹಾಗಾಗಿ ಈ ದೇಗುಲ ಜೀರ್ಣೋದ್ಧಾರ ಮಾಡಬೇಕೆಂಬ ಮನಸ್ಸಾಯಿತು. ಕಳೆದ ಒಂದು ವರ್ಷದಿಂದ ಕಾಮಗಾರಿ ನಡೆಯಿತು. 1 ಕೋಟಿ ರೂ.ಗೂ ಹೆಚ್ಚು ಖರ್ಚಾಗಿದೆ. ಈ ಹಿಂದೆ ಕೆಲವರು ಜೀರ್ಣೋದ್ಧಾರಕ್ಕೆ ಕೈಹಾಕಿದ್ದರೂ ಪೂರ್ಣಗೊಂಡಿರಲಿಲ್ಲ. ಈಗ ಇದು ಪೂರ್ಣಗೊಂಡಿದೆ. ಇದಕ್ಕೆ ಸಹಕರಿಸಿದ ವಿವಿಧ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಎಲ್ಲ ಜನಾಂಗದ ಮುಖಂಡರು, ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸುವೆ. ಡಾ.ಶಶಿಕಲಾ ರಮೇಶ್ ಉಡುಪ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net