

ಚನ್ನಪಟ್ಟಣ: ಪ್ರಸ್ತುತ ದಿನಗಳಲ್ಲಿ ಬ್ರಾಹ್ಮಣ ಸಮಾಜ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಮಹಾಸಭಾ ಸದಾ ಸಮುದಾಯದ ಜತೆಗೆ ನಿಲ್ಲುತ್ತದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್ ತಿಳಿಸಿದರು.
ನಗರದ ಕೋಟೆ ಶ್ರೀರಾಘವೇಂದ್ರ ಮಠದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾದಿಂದ ಆಯೋಜಿಸಿದ್ದ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಬ್ರಾಹ್ಮಣರಿಗೆ ಸರ್ಕಾರದಿಂದ ಆಗಬೇಕಿರುವ ಕೆಲಸಗಳನ್ನು ಮಾಡಿಸಿಕೊಡುವ ಜತೆಗೆ ಮಹಾಸಭಾದಿಂದಲೂ ಸಮಾಜದ ಪ್ರಗತಿಗೆ ನೆರವು ನೀಡಲಾಗುವುದು ಎಂದು ತಿಳಿಸಿದರು.
ಬ್ರಾಹ್ಮಣ ಸಮುದಾಯದವರು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಸಾಕಷ್ಟು ಪ್ರತಿಭಾವಂತರಿದ್ದರೂ ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದಾರೆ. ಇಂತಹ ಮಕ್ಕಳಿಗೆ ನೆರವು ನೀಡುವ ಉದ್ದೇಶದಿಂದ ಮಹಾಸಭಾ 100 ಕೋಟಿ ರೂ. ಶಾಶ್ವತ ನಿಧಿಯನ್ನು ಸ್ಥಾಪಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಈ ನಿಧಿಯನ್ನು ಸ್ಥಾಪಿಸಿ ಸಂಕಷ್ಟದಲ್ಲಿರುವ ಬ್ರಾಹ್ಮಣರ ಆರೋಗ್ಯ ಮತ್ತು ಶಿಕ್ಷಣಕ್ಕೆ ನೆರವು ನೀಡಲಾಗುವುದು ಎಂದು ತಿಳಿಸಿದರು.
ಮಹಾಸಭಾದ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ್ ಮಾತನಾಡಿ, ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ಮಹಾಸಭಾ ಸದಾಕಾಲ ಶ್ರಮಿಸುತ್ತದೆ ಎಂದರು.
ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು. ಕಲೆ, ಸಾಹಿತ್ಯ, ಕ್ರೀಡೆ, ಧಾರ್ಮಿಕ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ವಿಶೇಷ ಪ್ರತಿಭೆಗಳನ್ನು ಗೌರವಿಸಲಾಯಿತು.
ಪತ್ರಕರ್ತ ಅನಿಲ್‌ಕುಮಾರ್, ಬೃಂದಾವನ ಸಮಿತಿಯ ಅಧ್ಯಕ್ಷ ಡಿ.ವೆಂಕಟೇಶಮೂರ್ತಿ, ತಾಲೂಕು ಬ್ರಾಹ್ಮಣಮಹಾಸಭಾ ಪದಾಧಿಕಾರಿಗಳಾದ ಹೊಯ್ಸಳ, ಎಚ್.ಎನ್.ರಾಘವೇಂದ್ರ, ಬಾಲಾಜಿ, ಪೊಲೀಸ್ ವಿಜಯ್‌ಕುಮಾರ್ ಇದ್ದರು.