

ಕಿಕ್ಕೇರಿ: ಹೋಬಳಿಯಾದ್ಯಂತ ಶಿವ ಭಕ್ತರು ಉಪವಾಸ, ವ್ರತ, ಜಪ,-ತಪ, ಧ್ಯಾನ, ಜಾಗರಣೆಯೊಂದಿಗೆ ಶಿವಪಂಚಾಕ್ಷರಿ ಮಂತ್ರ ಪಠಿಸುತ್ತ ಬುಧವಾರ ಶಿವರಾತ್ರಿ ಆಚರಣೆ ಮಾಡಿದರು.
ಇಲ್ಲಿನ ಬ್ರಹ್ಮೇಶ್ವರ ದೇಗುಲದಲ್ಲಿ ಬುಧವಾರ ಸಂಜೆ 5.30ರಿಂದ ಗುರುವಾರ ಬೆಳಗ್ಗಿನ 5.30ರವರೆಗೆ ನಾಲ್ಕು ಜಾವದ ಪೂಜೆಗಳು ಜರುಗಿದವು. ರುದ್ರ, ಚಮಕ ಪಠಣೆ ಮಾಡುತ್ತ ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾಭಿಷೇಕ ನೆರವೇರಿಸಿದರು.ದೇಗುಲದಲ್ಲಿನ ಪಾರ್ವತಿದೇವಿ, ಕಾಲಭೈರವೇಶ್ವರನಿಗೆ ವಿವಿಧ ವಸ್ತ್ರಾಭರಣ ಅಲಂಕಾರ ಮಾಡಲಾಗಿತ್ತು. ಭಕ್ತರು ಉಪವಾಸ ವ್ರತದೊಂದಿಗೆ ಶಿವ ಪಂಚಾಕ್ಷರಿ ಮಂತ್ರ, ಮೃತ್ಯುಂಜಯ ಮಂತ್ರ, ಸಹಸ್ರನಾಮ, ಅಷ್ಟೋತ್ತರ ಪಠಣೆ ಮಾಡಿದರು. ಗುರುವಾರ ಅನ್ನ ದಾಸೋಹ ಏರ್ಪಡಿಸಲಾಗಿತ್ತು. ಹೋಬಳಿಯ ವಿವಿಧ ಶಿವಾಲಯಗಳಲ್ಲಿ ಭಕ್ತರಿಗೆ ವಿಭೂತಿ, ಬಿಲ್ವಪತ್ರೆ ಪ್ರಸಾದ ಹಮ್ಮಿಕೊಳ್ಳಲಾಗಿತ್ತು.
ಗೋವಿಂದನಹಳ್ಳಿ ಪಂಚಲಿಂಗೇಶ್ವರ ದೇಗುಲದಲ್ಲಿ ಭಕ್ತರು ಜಾಗರಣೆ ಇದ್ದು ದೇವರ ದರ್ಶನ ಪಡೆದರು. ಬಯಲುಸೀಮೆಯ ಕುಕ್ಕೆ ಸುಬ್ರಹ್ಮಣ್ಯ ಎಂದೇ ಹೆಸರಾದ ಸಾಸಲು ಕ್ಷೇತ್ರದ ದೇಗುಲದಲ್ಲಿ ನಡೆದ ಬೆಳಗ್ಗಿನ ಜಾವದ ಪೂಜೆಗೆ ನೂರಾರು ಜನರು ಪಾಲ್ಗೊಂಡಿದ್ದರು. ಬೇವಿನಹಳ್ಳಿಯ ಅಂಕನಾಥೇಶ್ವರ, ಊಗಿನಹಳ್ಳಿಯ ಈಶ್ವರ ದೇಗುಲ, ಮಾದಾಪುರ ತ್ರಯಂಭಕೇಶ್ವರ, ಮಾದಾಪುರಕೊಪ್ಪಲು ರಾಮೇಶ್ವರ, ಅಂಕನಹಳ್ಳಿ ಮಲ್ಲೇಶ್ವರ, ಐಕನಹಳ್ಳಿ ಬಸವೇಶ್ವರ, ತೆಂಗಿನಘಟ್ಟ ಈಶ್ವರ ದೇಗುಲ, ಗದ್ದೆಹೊಸೂರುವಿನ ಜೋಡಿ ಬಸವೇಶ್ವರ, ದೊಡ್ಡತರಹಳ್ಳಿ ವೀರಭದ್ರೇಶ್ವರ ದೇಗುಲದಲ್ಲಿ ಪೂಜೆಗಳು ನಡೆದವು. ಹೋಬಳಿಯ ವಿವಿಧ ಗ್ರಾಮಗಳಲ್ಲಿ ಯುವಕ ಸಂಘಗಳು ವಾಲಿಬಾಲ್, ಕ್ರಿಕೆಟ್, ಕಬಡ್ಡಿ ಪಂದ್ಯಾವಳಿ ಆಯೋಜಿಸಿದ್ದವು.
ಅನಿಲ್‌ಶಾಸ್ತ್ರಿ, ಆದಿತ್ಯ ಭಾರದ್ವಾಜ್, ಮಹಬಲರಾವ್ ಶರ್ಮ, ಗಣೇಶರಾವ್, ಕೆ.ಎಸ್. ಪ್ರಭಾಕರ್, ಶ್ರೀಹರಿ ಶರ್ಮ, ನರಸಿಂಹ, ಕೆ.ಎಸ್.ಪರಮೇಶ್ವರಯ್ಯ, ಕೆ.ಬಿ.ವೆಂಕಟೇಶ್, ದೀಪಕ್, ರಘು, ಪ್ರಸಾದ್, ಬಜರಂಗದಳ ಅಕ್ಷಯ್ ಮತ್ತಿತರರಿದ್ದರು.