

ಕಾರವಾರ:ನಕಲಿ ಬಂಗಾರಕ್ಕೆ ಅಸಲಿ ಎಂಬ ಪ್ರಮಾಣಪತ್ರ ನೀಡಿ ಬ್ಯಾಂಕ್‌ಗೆ ಮೋಸ ಮಾಡಿದವರಿಬ್ಬರಿಗೆ ಕಾರವಾರ ಎಂಎಸಿಟಿ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಮಲ್ಲಾಪುರದ ಸಿಂಡಿಕೇಟ್ ಬ್ಯಾಂಕ್(ಈಗಿನ ಕೆನರಾ ಬ್ಯಾಂಕ್) ಶಾಖೆಗೆ ಮೋಸ ಮಾಡಿದ ಕದ್ರಾದ ರಾಜಕುಮಾರ ತಿಮ್ಮಪ್ಪ ಶೇಟ್ ಹಾಗೂ ಸಂದೀಪ ಗಣಪತಿ ರಾಯ್ಕರ್ ಶಿಕ್ಷೆಗೊಳಗಾದವರು. ಕುರ್ನಿಪೇಟೆಯಲ್ಲಿ ಬಂಗಾರದ ಅಂಗಡಿ ಹೊಂದಿದ್ದ ರಾಜಕುಮಾರ ತಿಮ್ಮಪ್ಪ ಶೇಟ್ ಮಲ್ಲಾಪುರ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಬಂಗಾರದ ಪರಿವೀಕ್ಷಕ ಎಂದು ನೇಮಕವಾಗಿದ್ದ. ಆದರೆ, ನಕಲಿ ಬಂಗಾರವನ್ನು ಅಸಲಿ ಎಂದು ಪ್ರಮಾಣಪತ್ರ ನೀಡಿ ಬ್ಯಾಂಕ್‌ಗೆ ಮೋಸ ಮಾಡಿದ್ದ.
`ನಾನು ಬ್ಯಾಂಕ್‌ನಲ್ಲಿ ಬಂಗಾರ ಪರೀಕ್ಷಕನಾಗಿರುವುದರಿಂದ ನೇರವಾಗಿ ಬಂಗಾರ ಅಡವಿಡಲು ಸಾಧ್ಯವಿಲ್ಲ. ಇದರಿಂದ ನಿಮ್ಮ ಹೆಸರಲ್ಲಿ ಬಂಗಾರ ಅಡವಿಟ್ಟು ಸಾಲ ಪಡೆದು ನನಗೆ ಕೊಡುವಂತೆ ತನ್ನ ಪರಿಚಯಸ್ಥರಿಗೆ ಮನವಿ ಮಾಡುತ್ತಿದ್ದ. ಒಪ್ಪಿದಲ್ಲಿ ಅವರ ಕೈಗೆ ನಕಲಿ ಬಂಗಾರ ನೀಡಿ ಬ್ಯಾಂಕ್‌ನಲ್ಲಿ ಅಡವಿಡುವಂತೆ ಸೂಚಿಸುತ್ತಿದ್ದ. ಬಂಗಾರ ಪರಿಶೀಲನೆಗಾಗಿ ತನ್ನ ಬಳಿ ಬಂದಾಗ ಅದು ಅಸಲಿ ಎಂದು ಪ್ರಮಾಣೀಕರಣ ಮಾಡಿ ಸಾಲ ದೊರೆಯುವಂತೆ ಮಾಡುತ್ತಿದ್ದ. ಹೀಗೆ ನಕಲಿ ಬಂಗಾರವನ್ನು ಬ್ಯಾಂಕ್‌ನಲ್ಲಿ ಅಡವಿರಿಸಿ ಕೋಟ್ಯಂತರ ರೂ.ಮೋಸ ಮಾಡಿದ್ದ. 2016 ರಲ್ಲಿ ಈ ಪ್ರಕರಣ ಬಲಯಾಗಿತ್ತು. ಸಂದೀಪ ಗಣಪತಿ ರಾಯ್ಕರ್ ಎಂಬಾತ ಅಡವಿಟ್ಟು ಪಡೆದ 2.76 ಲಕ್ಷ ರೂ. ಮೌಲ್ಯದ ಬಂಗಾರದ ಬಗ್ಗೆ ಅನುಮಾನ ಬಂದು ಪರಿಶೀಲಿಸಿದಾಗ ಅದು ನಕಲಿ ಎಂದು ಗೊತ್ತಾಗಿತ್ತು. ನಂತರ ಬ್ಯಾಂಕ್‌ನಲ್ಲಿ ಅಡವಿಟ್ಟುಕೊಂಡಿದ್ದ ಇತರ ಬಂಗಾರದ ಆಭರಣ ಪರಿಶೀಲಿಸಿದಾಗ ಅದೂ ನಕಲಿ ಎಂಬುದು ಬಯಲಾಗಿತ್ತು. ಈ ಬಗ್ಗೆ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿಗಳು ಮಲ್ಲಾಪುರ ಠಾಣೆಯಲ್ಲಿ ದೂರು ನೀಡಿದ್ದರು. ಆಗ ರಾಜಕುಮಾರ ಶೇಟ್ ನಾಪತ್ತೆಯಾಗಿದ್ದ. ಪ್ರಕರಣ ಭೇದಿಸಿದ ಆಗಿನ ಕದ್ರಾ ಸಿಪಿಐ ನಿತ್ಯಾನಂದ ಪಂಡಿತ ಇಬ್ಬರನ್ನೂ ಬಂಧಿಸಿ, ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ 2 ನೇ ಹೆಚ್ಚುವರಿ ಎಂಎಸಿಟಿ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಮಹಾಂತೇಶ ದರಗದ ತೀರ್ಪು ಪ್ರಕಟಿಸಿದ್ದಾರೆ. ಮಂಜುನಾಥ ನಾಯ್ಕ ಹಾಗೂ ಎಸ್.ಬಿ.ಮುಲ್ಲಾ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.