

ಕಲಬುರಗಿ: ಕನ್ನಡದಲ್ಲಿ ಬೌದ್ಧ ಸಾಹಿತ್ಯ ಕೃತಿಗಳು ಬಂದಿವೆ. ಆದರೆ ಅವುಗಳ ಸಮಗ್ರ ಅಧ್ಯಯನ, ಅನುಸಂಧಾನಗೊಳಿಸುವ ಅಗತ್ಯವಿದೆ ಎಂದು ಬೌದ್ಧ ಸಾಹಿತ್ಯ ವಿದ್ವಾಂಸ ಪ್ರೊ.ಶಿವಾಜಿ ಜೋಯಿಸ್ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಬುದ್ಧನ ಜೀವನ ಚರಿತ್ರೆ ಕೃತಿಗಳ ಅನುಸಂಧಾನ ಕುರಿತು ಭಾನುವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿದ ಅವರು, ಬೌದ್ಧ ಸಾಹಿತ್ಯ ಅಧ್ಯಯನಕ್ಕೆ ಸಾಂಸ್ಕೃತಿಕ ಹಿನ್ನೆಲೆ ಒಳಪಡಿಸುವ ನಿಟ್ಟಿನಲ್ಲಿ ರಚನೆಗೊಂಡ ೧೦೦೦ ಕೃತಿಗಳನ್ನು ಸಂಗ್ರಹಿಸಿ ಬುದ್ಧಯಾನ ಎಂಬ ಕಾರ್ಯಾಗಾರ ಏರ್ಪಡಿಸಿದ್ದು ಗಮನಾರ್ಹ ಎಂದರು.
ಜಿ.ಪಿ.ರಾಜರತ್ನA ಆದಿಯಾಗಿ ಕನ್ನಡದ ಬೌದ್ಧ ಸಾಹಿತ್ಯದಲ್ಲಿ ಬುದ್ಧನ ಕುರಿತ ಮೌಲಿಕ ಚಿಂತನೆ ಬಿತ್ತುವ ಕೆಲಸ ನಡೆಸುತ್ತಿರುವುದು ಸಂತಸದ ಸಂಗತಿ. ಹಿತಬೋಧನೆ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ ಶೋಧಿಸಿದ ಎಸ್.ಜಿ. ನರಸಿಂಹಾಚಾರ್ಯರ ಆರು ಸಂಪುಟಗಳ ಅಧ್ಯಯನ ನಡೆಯಬೇಕಿದೆ. ಬುದ್ಧನ ಜೀವನದ ಬಗ್ಗೆ ಜಗತ್ತಿಗೆಲ್ಲ ಗೊತ್ತು. ಆದರೆ ೨೬೦೦ ವರ್ಷ ಹಿಂದಿನ ಚಾರಿತ್ರಿಕ ಅಂಶಗಳು, ಬೋಧನೆ ಪಾಶ್ಚಾತ್ಯರಿಂದ ರಚನೆಗೊಂಡವು. ವಿಶೇಷವೆಂದರೆ ಪಾಲಿ, ಪಾಕೃತ ಮತ್ತು ಸಂಸ್ಕೃತ ಭಾಷೆಗಳಲ್ಲಿ ರಚನೆಯಾದಂಥವು. ಬುದ್ಧನ ಕುರಿತು ತ್ರಿಪಿಟಕಗಳಲ್ಲಿ ಅಂಶಗಳು ಸಿಗುವುದಿಲ್ಲ. ಬುದ್ಧನ ಕೊನೆಯ ದಿನಗಳ ಕುರಿತ ಅಂಶಗಳು ಪರಿನಿಬ್ಬಾಣ ಸುತ್ತದಲ್ಲಿ ಉಲ್ಲೇಖಗೊಂಡಿವೆ ಎಂದು ಹೇಳಿದರು.
ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ, ಕಲಾ ನಿಕಾಯದ ಡೀನ್ ಪ್ರೊ.ರಮೇಶ ರಾಠೋಡ್ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ವೆಂಕಟೇಶ ಮಾತನಾಡಿ, ಇಂತಹ ಕಾರ್ಯಾಗಾರಗಳ ಮೂಲಕ ಯುವ ಪೀಳಿಗೆ ಬುದ್ಧನ ಜೀವನ ಚರಿತ್ರೆ ಅಧ್ಯಯನ, ಅನುಸಂಧಾನದಿAದ ಸಂಶೋಧನ್ಮಾತಕ ಅಂಶಗಳು ಮುಖ್ಯ ವಾಹಿನಿಗೆ ಬರಲು ಸಾಧ್ಯ. ಇದರಿಂದ ಬುದ್ಧ ಪ್ರಜ್ಞೆ ಪಸರಿಸಲು, ಬುದ್ಧನ ಬೋಧನೆ, ಚಿಂತನೆ ಕುರಿತ ಚರ್ಚೆ ನಡೆದು ಒಮ್ಮತದ ಅಭಿಪ್ರಾಯಕ್ಕೆ ಬರಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಿದ್ಧಾರ್ಥ ಬುದ್ಧವಿಹಾರ ಟ್ರಸ್ಟ್ ಆಡಳಿತಾಧಿಕಾರಿ ರಮೇಶ ಬೇಗಾರ, ಅತಿಥಿ ಉಪನ್ಯಾಸಕರು, ಸಂಶೋಧನಾ, ಸ್ನಾತಕೋತ್ತರ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ಬೌದ್ಧ ಅನುಯಾಯಿಗಳು ಉಪಸ್ಥಿತರಿದ್ದರು. ಡಾ.ಎಂ.ಬಿ. ಕಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು, ಡಾ.ಹಣಮಂತ ಮೇಲ್ಕೇರಿ ವಂದಿಸಿದರು. ಡಾ.ಸಂತೋಷಕುಮಾರ ಕಂಬಾರ ನಿರೂಪಣೆ ಮಾಡಿದರು.