ಬೊಳ್ಳರಿಮಾಡಿನಲ್ಲಿ ವನ್ಯಪ್ರಾಣಿಗಳ ಹಾವಳಿ

Oplus_16908288
Oplus_16908288
Published on

ವಿರಾಜಪೇಟೆ: ವಿರಾಜಪೇಟೆ ತಾಲೂಕಿನ ಬೊಳ್ಳರಿಮಾಡು ಗ್ರಾಮ ವ್ಯಾಪ್ತಿಯಲ್ಲಿ ರಾತ್ರಿ ವೇಳೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕಳೆದ ಎರಡು ವರ್ಷಗಳಿಂದ ವನ್ಯಪ್ರಾಣಿ ಹಾಗೂ ಮಾನವ ಸಂಘರ್ಷ ನಿರಂತರವಾಗಿದೆ.

ಮೂರು ತಿಂಗಳ ಹಿಂದೆ ಹುಲಿ ದಾಳಿಗೆ ಕರು ಬಲಿಯಾದರೆ, ಆರು ತಿಂಗಳ ಹಿಂದೆ ಹಸು ಬಲಿಯಾಗಿತ್ತು. ಇದೀಗ ಬೊಳ್ಳರಿಮಾಡು ಗ್ರಾಮದಲ್ಲಿ ಕಾಡಾನೆ ಹಾಗೂ ಹುಲಿ ಕಾಫಿ ತೋಟದಲ್ಲಿ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇತ್ತೀಚೆಗೆೆ ಬಿದ್ದಂಡ ಕರುಂಬಯ್ಯ ಅವರ ತೋಟದಲ್ಲಿ ಬಾಳೆಗಿಡ ಹಾಗೂ ಸಿ.ಸಿ. ಕ್ಯಾಮರಾ, ಕಬ್ಬಿಣದ ಗೇಟ್ ಸೇರಿದಂತೆ ಕಾಫಿ ಗಿಡಗಳನ್ನು ಧ್ವಂಸ ಮಾಡಿದೆ.

ಅಲ್ಲದೇ ಲೈನ್‌ಮನೆಯ ಬಳಿಯಿದ್ದ ಇನ್ನೊಂದು ತೋಟಕ್ಕೆ ತೆರಳಿದೆ. ಲೈನ್‌ಮನೆಯಲ್ಲಿ ವಾಸವಾಗಿದ್ದ ಕಾರ್ಮಿಕರು ಜೀವಭಯದಲ್ಲಿ ರಾತ್ರಿ ಕಳೆದಿದ್ದಾರೆ. ಬೆಳಗಿನ ಜಾವ ಮಾಲೀಕರಿಗೆ ಮಾಹಿತಿ ನೀಡಿದ ಕಾರ್ಮಿಕರು ಕಾಡಾನೆ ಧ್ವಂಸ ಮಾಡಿದ ಸ್ಥಳ ಪರಿಶೀಲಿಸಿದಾಗ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದೆ. ಇದನ್ನು ಕಂಡ ಕಾರ್ಮಿಕರು ಭಯದಿಂದ ಮನೆಗೆ ತೆರಳಿದ್ದಾರೆ.

ಸ್ಥಳೀಯರು ಹಾಗೂ ಕಾಫಿ ಬೆಳೆಗಾರರಾದ ಬಿದ್ದಂಡ ಮಂದಪ್ಪ ಮಾತನಾಡಿ, ಕಳೆದ ಎರಡು ವರ್ಷಗಳಿಂದ ನಿರಂತರ ವನ್ಯಪ್ರಾಣಿಗಳ ಉಪಟಳದ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಗ್ರಾಮದಲ್ಲಿ ವನ್ಯಜೀವಿಗಳ ಹಾವಳಿಯಿಂದ ಗ್ರಾಮಗಳಲ್ಲಿ ಯಾವುದೇ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲಿ ಎರಡು ಮರಿ ಆನೆ ಹಾಗೂ ತಾಯಿ ಆನೆಗಳು ಭತ್ತದ ಗದ್ದೆ ಕಾಫಿ ತೋಟಗಳಲ್ಲಿ ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆಯನ್ನು ನಾಶ ಮಾಡುತ್ತಿವೆ. ಮುಂದಿನ ದಿನಗಳಲ್ಲಿ ಕಾಫಿ ಕೆಲಸ ಪ್ರಾರಂಭವಾಗುತ್ತದೆ. ಇದರೊಂದಿಗೆ ಭತ್ತದ ಕೊಯ್ಲು ಕೆಲಸ, ಕಾಡಾನೆ ಹಾಗೂ ಹುಲಿ ಹಾವಳಿಯಿಂದ ತೋಟದ ಕೆಲಸಕ್ಕೆ ಕಾರ್ಮಿಕರು ಬರುತ್ತಿಲ್ಲ. ನಮಗೆ ಹಾಗೂ ಕಾರ್ಮಿಕರ ಜೀವಕ್ಕೆ ಹಾನಿಯಾದರೆ ಯಾರನ್ನು ಕೇಳುವುದು ಮತ್ತು ಇದಕ್ಕೆ ಹೊಣೆ ಯಾರು? ವನ್ಯಜೀವಿ ಮಂಡಳಿ ಸದಸ್ಯರಾದ ಸಂಕೇತ್ ಪೂವಯ್ಯ ಅವರು ಇಲ್ಲಿಗೆ ಬಂದು ಭರವಸೆ ಕೊಟ್ಟು ಮಾತನಾಡಿ ಹೋಗಿದ್ದು ಬಿಟ್ಟರೆ ಯಾವುದೇ ಪರಿಹಾರ ಮಾತ್ರ ಇದುವರೆಗೂ ಆಗಿಲ್ಲ. ಅರಣ್ಯ ಇಲಾಖೆಯವರು ವನ್ಯಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಬಿ.ಟಿ.ಶಿವರಾಮ್ ರೈ, ಬಿ.ಜಿ.ದಿಲೀಪ್ ರೈ,ತಾತೀರ ದಿನೇಶ್ ಕುಮಾರ್, ತಾತೀರ ಜಗದೀಶ್, ಬಿದ್ದಂಡ ಪೊನ್ನಪ್ಪ (ಉತ್ತಪ್ಪ), ಬಿದ್ದಂಡ ಪ್ರಣಮ್, ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net