ಬೊಲೋ ಶ್ರೀ ರಾಮಚಂದ್ರ ಕೀ ಜೈ

DSC_6961
Published on

ಕಲಬುರಗಿ: ಬೋಲೋ ಜೈ ಶ್ರೀರಾಮ, ಸೀತಾಪತಿ ಜೈ ಶ್ರೀರಾಮ, ಜೈ ಸಿಯಾರಾಮ, ರಾಮಭಕ್ತ ಹನುಮಾನ ಕೀ ಜೈ, ಬಜರಂಗಿ ಬಜರಂಗಿ ಘೋಷಣೆ ಎಲ್ಲೆಡೆ ಕೇಸರಿ ಧ್ವಜಗಳ ಕಲರವದೊಂದಿಗೆ ಶ್ರೀರಾಮ ನಾಮದ ಝೇಂಕಾರದ ಅನುರಣನೆ…

ಶ್ರೀರಾಮ ನವಮಿ ನಿಮಿತ್ತ ನಗರದಲ್ಲಿ ಶ್ರೀರಾಮ ನವಮಿ ಉತ್ಸವ ಸಮಿತಿ, ಆದಿಪುರುಷ ಶ್ರೀರಾಮ ನವಮಿ ಉತ್ಸವ ಸಮಿತಿ, ಶ್ರೀರಾಮಸೇನೆಯಿಂದ ಬುಧವಾರ ಏರ್ಪಡಿಸಿದ್ದ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮೂರ್ತಿಯ ಭವ್ಯ ಶೋಭಾಯಾತ್ರೆಯಲ್ಲಿ ಕಂಡು ಬಂದ ದೃಶ್ಯವಿದು.
ರಾಮನಾಮ ಘೋಷಣೆಯೊಂದಿಗೆ ಬನಾಯೆಂಗೆ ಮಂದಿರ್.., ಭಗವಾ ರಂಗ್, ಪ್ರಭು ಶ್ರೀರಾಮಕೀ ಜೈ, ಹರ್ ಘರ್ ಭಗವಾ ಛಾಯೇಗಾ, ಭಾರತ್ ಕಾ ಬಚ್ಚಾ ಬಚ್ಚಾ ಜೈಶ್ರೀರಾಮ ಬೋಲೇಗಾ, ರಾಮ್ ಜೀ ಕೀ ನಿಕಲಿ ಸವಾರಿ, ಹಮ್ ಭಗವಾ ಧಾರಿ ಹೈ, ಶ್ರೀರಾಮ ಜಾನಕಿ… ಸೇರಿ ಶ್ರೀರಾಮನ ಹಾಡುಗಳಿಗೆ ಸಹಸ್ರಾರು ಯುವಕರು ನೃತ್ಯ ಮಾಡುತ್ತ ಹೆಜ್ಜೆ ಹಾಕಿದರು. ಡಿಜೆ, ಹಲಗೆ, ಡೊಳ್ಳು, ಚಂಡೆ ಮದ್ದಳೆಗಳ ನಾದ ವೈಭವ ಮೆರವಣಿಗೆಗೆ ಮೆರಗು ನೀಡಿತು.
ವಿವಿಧ ಪೂಜ್ಯರು, ಹಿಂದೂ ಮುಖಂಡರ ಸಮ್ಮುಖದಲ್ಲಿ ಶೋಭಾಯಾತ್ರೆ ಆರಂಭವಾಯಿತು. ರಾಮತೀರ್ಥ ದೇವಸ್ಥಾನದಿಂದ ಎರಡು ಮೂರ್ತಿ, ಗಂಜ್‌ನ ನಗರೇಶ್ವರದಿಂದ ಒಂದು ಮೂರ್ತಿ ಸೇರಿ ಒಟ್ಟು ಮೂರು ಮೂರ್ತಿಗಳು ಜಗತ್ ವೃತ್ತಕ್ಕೆ ಆಗಮಿಸಿದ ನಂತರ ಶೋಭಾಯಾತ್ರೆ ಸಂಪನ್ನವಾಯಿತು.
ವಿಶ್ವ ಹಿಂದು ಪರಿಷತ್ ಗೌರವಾಧ್ಯಕ್ಷ ಲಿಂಗರಾಜಪ್ಪ ಅಪ್ಪ, ಚವದಾಪುರಿ ಹಿರೇಮಠದ ಶ್ರೀ ರಾಜಶೇಖರ ಶಿವಾಚಾರ್ಯರು, ಶ್ರೀ ಕೇದಾರ ಸ್ವಾಮೀಜಿ, ಡಾ.ಅಪ್ಪಾರಾವ ದೇವಿ ಮುತ್ಯಾ, ಸಂಸದ ಡಾ.ಉಮೇಶ ಜಾಧವ್, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಬಾಲರಾಜ ಗುತ್ತೇದಾರ್, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ರಾಜು ಭವಾನಿ, ಹರ್ಷಾನಂದ ಗುತ್ತೇದಾರ, ಶಿವಾನಂದ ಪಿಸ್ತಿ, ಕೃಷ್ಣಾ ನಾಯಕ, ಸಚಿನ ಕಡಗಂಚಿ, ಮಲ್ಲಿಕಾರ್ಜುನ ಸಾರವಾಡ, ಶರಣಬಸಪ್ಪ ಭೂಸನೂರ, ಮಹೇಶ ಗೊಬ್ಬುರ ಸೇರಿದಂತೆ ಉತ್ಸವ ಸಮಿತಿಗಳ ಸದಸ್ಯರು, ಸಹಸ್ರಾರು ರಾಮ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net