

ಗುಂಡ್ಲುಪೇಟೆ: ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಹುಲಿ ಸೆರೆಗೆ ಬುಧವಾರ ಕೂಂಬಿಂಗ್ ಆರಂಭಿಸಲಾಗಿದೆ.
ಹುಲಿ ಸೆರೆ ಹಿಡಿಲು ಇಟ್ಟಿದ್ದ ಬೋನಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಗ್ರಾಮಸ್ಥರು ಕೂಡಿ ಹಾಕಿದ್ದ ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಮಧ್ಯಾಹ್ನ ಆಗಮಿಸಿದರು. ಸ್ಥಳಕ್ಕೆ ಲಾರಿಯಲ್ಲಿ ಪಾರ್ಥಸಾರಥಿ ಆನೆಯನ್ನು ಕರೆತಂದರು. ಬಳಿಕ ಪಾರ್ಥಸಾರಥಿ ಆನೆ ಬಳಸಿಕೊಂಡು ಹುಲಿ ಸೆರೆಗೆ ಕೂಂಬಿಂಗ್ ನಡೆಯಿತು.
ದೂರು ದಾಖಲು: ಅರಣ್ಯ ಸಿಬ್ಬಂದಿಯನ್ನು ಬೋನಿಗೆ ಕೂಡಿ ಹಾಕಿದ ಪ್ರಕರಣದಲ್ಲಿ ಗ್ರಾಮದ ಐದು ರೈತರ ಮೇಲೆ ಅರಣ್ಯಾಧಿಕಾರಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗ್ರಾಮಸ್ಥರಾದ ರಘು, ಗಂಗಾಧರಸ್ವಾಮಿ, ರೇವಣ್ಣ, ದೀಪು ವಿರುದ್ಧ ದೂರು ಕೊಡಲಾಗಿದೆ.
ಬೊಮ್ಮಲಾಪುರದಲ್ಲಿ ಕೂಂಬಿಂಗ್ ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಜ್ಞಾನಶೇಖರ, ಕಾರ್ತಿಕ್‌ಯಾದವ್, ವಿನಯ್, ಬಸವೇಗೌಡ, ಸುಚಿತ್ರಾ, ವಾಹನ ಚಾಲಕ ಸೋಮು ಮಂಗಳವಾರ ಬೆಳಗ್ಗೆ ವನ್ಯಪ್ರಾಣಿ ಕೂಂಬಿಂಗ್‌ಗೆ ಹೋಗುತ್ತಿದ್ದರು. ಈ ವೇಳೆ ರಘು, ಪ್ರಸಾದ್, ದೀಪು, ಗಂಗಾಧರಸ್ವಾಮಿ ಮತ್ತು ರೇವಣ್ಣ ಇಲಾಖೆಯ ವಾಹನವನ್ನು ಅಡ್ಡಗಟ್ಟಿದರು. ಏರುಧ್ವನಿಯಲ್ಲಿ ಬಲವಂತವಾಗಿ ಇಲಾಖೆಯ ಮಹಿಳಾ ಸಿಬ್ಬಂದಿಯನ್ನು ಸಹ ಲೆಕ್ಕಿಸದೆ ಅವಾಚ್ಯ ಪದಗಳಿಂದ ನಿಂದಿಸಿ ವಾಹನದಿಂದ ಸಿಬ್ಬಂದಿಯನ್ನು ಬಲವಂತವಾಗಿ, ದೈಹಿಕವಾಗಿ ಕೈ ಮಾಡಿ ಕೆಳಗಿಳಿಸಿದರು.
ವಾಹನದ ಚಕ್ರದ ಗಾಳಿ ತೆಗೆದರು. ಗ್ರಾಮಸ್ಥರ ಸಹಾಯದಿಂದ ವನ್ಯಜೀವಿ ಸೆರೆಗೆ ಇಟ್ಟಿದ್ದ ಬೋನಿಗೆ ತಳ್ಳಿ ಹೊರಗಿನಿಂದ ಲಾಕ್ ಮಾಡಿದರು. ಅವಾಚ್ಯವಾಗಿ ನಿಂದಿಸಿ, ಪಕ್ಕದಲ್ಲಿದ್ದ ಸೌದೆ, ಮರ ಮತ್ತು ಒಣ ಕಟ್ಟಿಗೆಗಳನ್ನು ಬೋನಿನ ಸುತ್ತ ಹಾಕಿ ಜೀವಂತವಾಗಿ ಸುಡಲು ಪ್ರಚೋದನೆ ನೀಡಿದರು ಎಂದು ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.