

ಬಾಗಲಕೋಟೆ: ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಎಲ್ಲ ಇ-ಕಚೇರಿಗಳಾಗಬೇಕು ಎನ್ನುವುದು ಸರ್ಕಾರದ ಉದ್ದೇಶ. ಆದರೆ, ಬಾಗಲಕೋಟೆ ಜಿಲ್ಲೆಯ ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ಇ-ಆಫೀಸ್‌ಗೆ ಅದೇಕೋ ನಿರ್ಲಕ್ಷ್ಯ! ಆದರೆ, ಈ ನಿಷ್ಕಾಳಜಿ ಹಿಂದಿರುವ ಮಾಸ್ಟರ್ ಪ್ಲಾನ್ ಏನು ಎಂದು ಸ್ವತಃ ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡರೇ ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದರೆ ಅಧಿಕಾರಿಗಳು ಅಕ್ಷರಶಃ ಬೆವತು ಹೋಗಿದ್ದರು.
ಸೋಮವಾರ ಜಿಲ್ಲೆಗೆ ಆಗಮಿಸಿದ್ದ ಸಚಿವರು, ಜಿಲ್ಲಾ ಪಂಚಾಯಿಸಿ ಸಭಾಭವನದಲ್ಲಿ ನಡೆದ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಇ-ಕಚೇರಿಯಲ್ಲಿ ಬಹಳಷ್ಟು ಹಿಂದೆ ಇರುವ ಬಾಗಲಕೋಟೆ ಜಿಲ್ಲೆಯ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಮುಂದುವರೆದು, ಇದಕ್ಕೆ ಕಾರಣ ಏನು ಎನ್ನುವುದನ್ನು ಸಹ ಸಭೆಯಲ್ಲಿ ಬಹಿರಂಗಗೊಳಿಸಿದರು.
ಅಷ್ಟಕ್ಕೂ ಸಚಿವರು ಕಂಡುಕೊಂಡ ಸತ್ಯವೇನು…?
ಅಽಕಾರಿಗಳು ಇ-ಆಫೀಸ್ ಮಾಡಲು ಏಕೆ ಇಷ್ಟ ಇರಲ್ಲ ಎಂದರೆ, ಕಂದಾಯ ಅಧಿಕಾರಿಗಳು ತಮ್ಮ ತಪ್ಪು ಮುಚ್ಚಿಟ್ಟುಕೊಳ್ಳಬೇಕು. ತಮಗೆ ಇಷ್ಟ ಬಂದಂತೆ ಕಡತಗಳನ್ನು ವಿಲೇವಾರಿ ಮಾಡುವುದು, ಬಿಡುವುದು. ಆಡಳಿತದಲ್ಲಿ ಪಾರದರ್ಶಕತೆ ಬರಬಾರದು. ಕಚೇರಿಗೆ ಬರುವ ಎಲ್ಲ ಜನಗಳ ಜುಟ್ಟು ತಮ್ಮ ಕೈಯಲ್ಲಿಯೇ ಇರಬೇಕು. ನೀವು ಏನು ಮಾಡುತ್ತೀರಿ? ನಿಮ್ಮ ಶಿರಸ್ತೆದಾರರು ಏನು ಮಾಡುತ್ತಾರೆ? ಎಫಡಿಎಗಳು ಏನು ಮಾಡುತ್ತಾರೆ ಎಂದು ಹಿರಿಯ ಅಧಿಕಾರಿಗಳ ಗಮನಕ್ಕೆ ಬರಬಾರದು. ಕಚೇರಿಯಲ್ಲಿ ಯಾವ ಪೈಲಗಳು ಇರಬೇಕು, ಇನ್ಯಾವ ಫೈಲಗಳು ಆಗಬೇಕು.
ಕಚೇರಿಯಲ್ಲಿ ಭ್ರಷ್ಟಾಚಾರ, ಶ್ವೇಚ್ಛಾಚಾರ ನಡೆಯುತ್ತಿರಬೇಕು. ಈ ಎಲ್ಲ ಉದ್ದೇಶಗಳಿಂದ ಬಾಗಲಕೋಟೆ ಜಿಲ್ಲೆಯ ಕಂದಾಯ ಅಧಿಕಾರಿಗಳು ಈ-ಆಫೀಸ್‌ಗೆ ಕಾಳಜಿ ವಹಿಸುತ್ತಿಲ್ಲ. ಹೌದಲ್ಲವೆ? ನಾನು ಹೇಳಿದ್ದರಲ್ಲಿ ತಪ್ಪಿದ್ದರೆ ಹೇಳಿ, ಅದಕ್ಕೆ ನಾನು ಯಾವ ಕ್ರಮವನ್ನು ತೆಗೆದುಕೊಳ್ಳಲ್ಲ. ನೇರವಾಗಿ ಮಾತನಾಡಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರೆ ಡಿಸಿ ಆದಿಯಾಗಿ ಎಸಿಗಳು, ತಹಸೀಲ್ದಾರಗಳು ಎಲ್ಲರೂ ಇದನ್ನು ಅಲ್ಲಗಳೆಯುವ ಗೋಜಿಗೆ ಹೋಗಲಿಲ್ಲ.
ರಾಜ್ಯದಲ್ಲಿ ಅನೇಕ ಜಿಲ್ಲೆಗಳು ಆ. ೧ ರಂದೇ ಸಂಪೂರ್ಣ ಇ-ಆಫೀಸ್ ಮಾಡಿವೆ. ಕೆಲವು ಜಿಲ್ಲೆಗಳು ಪ್ರಗತಿಯಲ್ಲಿವೆ. ಆದರೆ, ಬಾಗಲಕೋಟೆ ಜಿಲ್ಲೆ ಮಾತ್ರ ಬಹಳಷ್ಟು ಹಿಂದೆ ಉಳಿದಿದೆ. ಇದಕ್ಕೆ ಕಾರಣ ಇವೆ ಅಲ್ಲವೆ ಎಂದು ಪ್ರಶ್ನಿಸಿದರು.