

ಬೇಲೂರು: ತಾಲೂಕಿನ ಘಟ್ಟದಹಳ್ಳಿ ಸರ್ಕಾರಿ ಶಾಲೆಗೆ ಸೇರಿದ ಜಾಗದ ಪಹಣಿಯಲ್ಲಿ ವಕ್ಫ್ ಬೋರ್ಡ್‌ಗೆ ಸೇರಿದ ಆಸ್ತಿ ಎಂದು ನಮೂದಿಸಿರುವುದನ್ನು ವಿರೋಧಿಸಿ ಶಾಸಕ ಎಚ್.ಕೆ.ಸುರೇಶ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ಪಟ್ಟಣದ ನೆಹರು ನಗರದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಈಗಾಗಲೇ ರಾಜ್ಯಾದ್ಯಂತ ವಕ್ಫ್ ಬೋರ್ಡ್‌ನ ಭೂವಿವಾದ ದೊಡ್ಡ ಸುದ್ದಿಯಾಗಿದೆ. ಆದರೂ ಸಹ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಬೇಲೂರು ವಿಧಾನಸಭಾ ಕ್ಷೇತ್ರದ ಹಳೇಬೀಡು ಹೋಬಳಿಯ ಘಟ್ಟದಳ್ಳಿ ಗ್ರಾಮದ ಸರ್ವೇ ನಂಬರ್ 435 ರಲ್ಲಿ 38 ಗುಂಟೆ ಜಾಗವನ್ನು ದಾನಿಗಳು ಭೂದಾನ ನೀಡಿ, ಇದರ ಜತೆಗೆ ದೇವಾಲಯ, ರುದ್ರಭೂಮಿ ಸೇರಿದಂತೆ ಇನ್ನಿತರ 590/2,639/8,589 ನಂಬರ್ ಅಲ್ಲದೆ ಕಳ್ಳಿಬೋರೆ ಕಾವಲು ಸರ್ವೇ ನಂ.75 ರಲ್ಲೂ ಹಿಂದು ರುದ್ರಭೂಮಿಗೆ ಮೀಸಲಿದ್ದ ಜಾಗವನ್ನು 3 ವರ್ಷಗಳ ಹಿಂದೆ ವಕ್ಫ್ ಬೋರ್ಡ್‌ಗೆ ಹಸ್ತಾಂತರಿಸಿದ್ದು ಇದಕ್ಕೆ ಯಾರು ಹೊಣೆ. ರೈತರ ಭೂಮಿ, ದಲಿತರ ಭೂಮಿ ಹಾಗೂ ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿದ್ದ ಭೂಮಿಯನ್ನು ಸಹ ಬಿಡದೆ ಕಬಳಿಸಿದ್ದಾರೆ ಎಂದು ದೂರಿದರು.
ಈಗ ರೈತರು ತಮ್ಮ ಭೂಮಿ ಯಾರ ಹೆಸರಿನಲ್ಲಿದೆ ಎಂದು ಭಯ ಭೀತರಾಗಿದ್ದಾರೆ. 2012ರಲ್ಲಿ ಇದ್ದಂತೆ ಶಾಲೆ, ರುದ್ರಭೂಮಿ, ದೇವಾಲಯ ಜಾಗ 2019-20 ರಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಾಗಿದೆ. ಇದರಿಂದಾಗಿ ರಾಜ್ಯ ಸರ್ಕಾರ ಎಲ್ಲ ಸಮಾಜಕ್ಕೂ ದ್ರೋಹ ಮಾಡುತ್ತಿದೆ. ಇದರ ಹಿಂದಿರುವ ವಸತಿ ಸಚಿವ ಜಮೀರ್ ಅಹಮದ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ವಕ್ಫ್ ಬೋರ್ಡ್‌ಗೆ ಖಾತೆಯಾಗಿರುವ ಭೂಮಿ ರದ್ದುಗೊಳಿಸಬೇಕು. ಬೇಲೂರು ದೇವಾಲಯದ ಆಸ್ತಿಯನ್ನೂ ಇತರರು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವ ಬಗ್ಗೆ ಮಾಹಿತಿ ಇದ್ದು ಅದರ ವಿರುದ್ಧವೂ ಪ್ರತಿಭಟಿಸಲಾಗುವುದು ಎಂದು ಹೇಳಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಕೌರಿ ಸಂಜಯ್ ಮಾತನಾಡಿ, ರಾಜ್ಯದಲ್ಲಿ ಇತರೆಡೆ ಮಾತ್ರ ಇದ್ದ ವಕ್ಫ್ ಬೋರ್ಡ್‌ನ ಆಸ್ತಿ ವಿವಾದ ಬೇಲೂರು ತಾಲೂಕಿಗೂ ವ್ಯಾಪಿಸಿದೆ. ಸರ್ಕಾರಿ ಶಾಲೆಗೆ ನೀಡಿದ ಭೂದಾನದ ಭೂಮಿಯನ್ನು ಕಬಳಿಸಿರುವುದರ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಾಗಬೇಕು. ವಕ್ಫ್ ಆಸ್ತಿ ಎಂದು ದಾಖಲಾಗಿರುವ ಎಲ್ಲ ಆಸ್ತಿಯನ್ನು ರದ್ದುಗೊಳಿಸಿ ಶಾಲಾ ಹಾಗೂ ರುದ್ರಭೂಮಿ ಜಾಗ ಎಂದು ನಮೂದಿಸಬೇಕು. ಇಲ್ಲದಿದ್ದರೆ ನಿರಂತರವಾಗಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಬಳಿಕ ತಹಸೀಲ್ದಾರ್ ಮಮತಾಗೆ ಮನವಿ ಸಲ್ಲಿಸಿದರು. ಬಿಜೆಪಿ ಮುಖಂಡರಾದ ರೇಣುಕುಮಾರ್, ಶೋಭಾ ಗಣೇಶ್, ಮೋಹನ್, ಭರತ್, ಶ್ರೀನಿವಾಸ್, ಜಿ.ಕೆ.ಕುಮಾರ್, ಸಿ.ಎಚ್.ಪ್ರಕಾಶ್, ರಮೇಶ್ ಸುವರ್ಣಾ ಇತರರಿದ್ದರು.