

ಪಾಂಡವಪುರ: ತಾಲೂಕಿನ ಬೇಬಿ ಬೆಟ್ಟದ ದನಗಳ ಜಾತ್ರೆ ಹಿನ್ನೆಲೆಯಲ್ಲಿ ಮಂಗಳವಾರ ಕ್ಷೇತ್ರ ದೇವತೆಗಳಾದ ಶ್ರೀ ಮಹದೇಶ್ವರ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಬೇಬಿ ಬೆಟ್ಟದ ರಾಮಯೋಗೀಶ್ವರ ಮಠದ ಆವರಣದಲ್ಲಿ ಶ್ರೀ ಮಲೆ ಮಹದೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ ಮಠದ ಪೀಠಾಧ್ಯಕ್ಷರಾದ ಶ್ರೀ ಶಿವಬಸವ ಸ್ವಾಮಿಜಿ, ಸಿದ್ಧಗಂಗಾ ಮಠದ ಶ್ರೀ ಶಿವ ಸಿದ್ದೇಶ್ವರ ಸ್ವಾಮೀಜಿ, ಶಾಸಕ ದರ್ಶನ್‌ಪುಟ್ಟಣ್ಣಯ್ಯ ಚಾಲನೆ ನೀಡಿದರು. ಸಾವಿರಾರು ಭಕ್ತರು ರಥದ ಉತ್ಸವ ಮೂರ್ತಿಗಳಿಗೆ ಹಣ್ಣು, ಜವನ ಎಸೆದು ರಥ ಎಳೆದು ದೇವಸ್ಥಾನ ಸುತ್ತ ಮೂರು ಸುತ್ತು ಪ್ರದಕ್ಷಿಣಿ ಹಾಕಿದರು. ಸುತ್ತಲ ಗ್ರಾಮಗಳ ಜನರು ಪಾಲ್ಗೊಂಡಿದ್ದರು.
ಶಾಸಕ ದರ್ಶನ್‌ಪುಟ್ಟಣ್ಣಯ್ಯ ಮಾತನಾಡಿ, ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ರಾಸುಗಳು ಆಗಮಿಸುವ ಮೂಲಕ ಜಾತ್ರೆಗೆ ಮೆರಗು ನೀಡಿದೆ. ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಯಶಸ್ವಿಗೊಳಿಸಿದ್ದಾರೆ. ರಥೋತ್ಸವವನ್ನು ಮೈಸೂರು ಮಹರಾಜರ ಆಳ್ವಿಕೆ ಕಾಲದಿಂದಲೂ ಆಚರಣೆ ಮಾಡಿಕೊಂಡು ಬರಲಾಗಿದೆ. ಹಾಗಾಗಿ ರಾಜ ವಂಶಸ್ಥರಿಗೆ ಜಾತ್ರಾ ಸಮಿತಿ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಬಿ.ವೈ.ವಿ., ಯದುವೀರ್ ಭಾಗಿ
ರಥೋತ್ಸವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸಿದ್ದರು. ದೇವರಿಗೆ ಪೂಜೆ ಸಲ್ಲಿಸಿ ಶ್ರೀ ಶಿವಬಸವ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡರು. ಬಳಿಕ ಮಠದ ವತಿಯಿಂದ ಇಬ್ಬರನ್ನು ಸನ್ಮಾನಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಮುಖಂಡರಾದ ಅಶೋಕ್ ಜಯರಾಮ್, ಸಿದ್ದರಾಮಯ್ಯ, ಮದ್ದೂರು ಎಸ್.ಪಿ.ಸ್ವಾಮಿ, ಮಹಿಳಾ ಮೋರ್ಚಾ ಘಟಕದ ಜಿಲ್ಲಾಧ್ಯಕ್ಷೆ ಮಂಗಳಾ ನವೀನ್‌ಕುಮಾರ್, ತಾಲೂಕು ಅಧ್ಯಕ್ಷ ಧನಂಜಯ್, ಮುಖಂಡ ಎಸ್‌ಎನ್‌ಟಿ ಸೋಮಶೇಖರ್, ನಿರಂಜನ್‌ಬಾಬು, ರೈತ ಮುಖಂಡ ರಾಘವ ಪ್ರಕಾಶ್ ಇತರರು ಇದ್ದರು.