ಬೇಬಿ ಬೆಟ್ಟದ ಜಾತ್ರೆಗೆ ದೇಶಿ ರಾಸುಗಳ ಮೆರುಗು

2-pnp 1a
Published on

ಪಾಂಡವಪುರ: ಪಾಂಡವಪುರ ತಾಲೂಕು ಬೇಬಿ ಬೆಟ್ಟದ ಭಾರಿ ದನಗಳ ಜಾತ್ರೆಗೆ ರಾಸುಗಳ ದಂಡೇ ಆಗಮಿಸಿದೆ. ದೇಶಿ ರಾಸುಗಳು ಜಾತ್ರೆಗೆ ವಿಶೇಷ ಮೆರುಗು ನೀಡಿವೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರಾಸುಗಳ ಮೇಲಿನ ವಿಶೇಷ ಪ್ರೀತಿ ಹೊಂದಿದ್ದರಿಂದ ಬೇಬಿ ಬೆಟ್ಟದ ಅಮೃತಮಹಲ್ ಕಾವಲ್ ಪ್ರದೇಶದಲ್ಲಿ ದೇಶಿ ದನಗಳ ಜಾತ್ರೆ ಪ್ರಾರಂಭಿಸಿದ್ದರು. ಅಂದಿನಿಂದ ಹಳೆ ಮೈಸೂರು ಪ್ರಾಂತ್ಯದಲ್ಲಿ ಈ ಜಾತ್ರೆ ಹೆಸರಾಗಿದೆ. ಮೈಸೂರು ಅರಸರು ರೂಢಿಸಿಕೊಂಡು ಬಂದಿದ್ದ ಜಾತ್ರೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಕ್ರಮೇಣ ಸರ್ಕಾರದ ಅಧೀನಕ್ಕೆ ಒಳಪಟ್ಟು ಸ್ಥಳೀಯ ಶಾಸಕರ ನೇತೃತ್ವದಲ್ಲಿ, ತಾಲೂಕು ಆಡಳಿತ ಮತ್ತು ಪಂಚಾಯತ್ ರಾಜ್ ಇಲಾಖೆ, ಪಶು ಸಂಗೋಪನಾ ಇಲಾಖೆ ಸೇರಿದಂತೆ ಬೇಬಿ ಬೆಟ್ಟದ ರಾಮಯೋಗೀಶ್ವರ ಮಠದೊಂದಿಗೆ ಪ್ರತಿವರ್ಷ ಶಿವರಾತ್ರಿ ದಿನದಂದು ಆರಂಭಗೊಂಡು 8 ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ.

ರಾಜ್ಯದ ವಿವಿಧ ಮೂಲೆಗಳಿಂದ ದೇಶಿ ತಳಿಯ ರಾಸುಗಳು ಜಾತ್ರೆಗೆ ಆಗಮಿಸಿವೆ. ದೇಶಿ ತಳಿ ರಾಸುಗಳನ್ನು ಖರೀದಿಸಿ ಅದನ್ನು ಸಾಕುವ ಹಂಬಲ ಇರುವ ರೈತರು ಜಾತ್ರೆಗೆ ಆಗಮಿಸಿ ರಾಸುಗಳನ್ನು ಖರೀದಿಸುತ್ತಾರೆ. ಈ ರಾಸುಗಳ ಬೆಲೆ 50 ಸಾವಿರ ರೂ.ನಿಂದ ಲಕ್ಷಾಂತರ ರೂ.ಬೆಲೆ ಬಾಳುತ್ತವೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಕೂಟ, ಏರ್ಪಡಿಸಲಾಗಿದೆ.

ಭಾಗವಹಿಸುವ ರಾಸುಗಳು:

ಜಾತ್ರೆಯಲ್ಲಿ ಹಾಲು ಹಲ್ಲಿನ ಜೋಡಿ ಕರು, ಎರಡು ಹಲ್ಲಿನ ಜೋಡಿ ಎತ್ತುಗಳು, ನಾಲ್ಕು ಹಲ್ಲಿನ ಜೋಡಿ ಎತ್ತು, ಆರು ಹಲ್ಲಿನ ಜೋಡಿ ಎತ್ತು, ಬಾಯಿಗೂಡಿದ ಜೋಡಿ ಎತ್ತು, ಹಾಲು ಹಲ್ಲಿನ ಜೋಡಿ ಕಡಸು, ಎರಡು, ನಾಲ್ಕು, ಆರು ಹಲ್ಲಿನ ಜೋಡಿ ಕಡಸು, ಹಾಲು ಹಲ್ಲಿನ ಬೀಜದ ಹೋರಿ ಹಾಗೂ ಎರಡು, ನಾಲ್ಕು ಮತ್ತು ಆರು ಹಲ್ಲಿನ ಬೀಜದ ಹೋರಿಗಳು ಹೀಗೆ ಹಲವು ರೀತಿಯ ರಾಸುಗಳ ಪ್ರದರ್ಶನ ಮತ್ತು ಮಾರಾಟಕ್ಕಿವೆ. ಉತ್ತಮ ರಾಸುಗಳಿಗೆ ಚಿನ್ನದ ಬಹುಮಾನ ನೀಡುವುದು ಇಲ್ಲಿನ ವಿಶೇಷ.

ಸಾವಯವ ಕೃಷಿಯಲ್ಲಿ ಸಾಧನೆ ಮಾಡಿರುವ ಪಾಂಡವಪುರ ತಾಲೂಕಿನ ಶ್ಯಾದನಹಳ್ಳಿ ಗ್ರಾಮದ ಕೃಷಿಕ ಚಲುವರಾಜು 5 ಲಕ್ಷ ರೂ.ಮೌಲ್ಯದ ಎರಡು ಹಲ್ಲಿನ ಹಳ್ಳಿಕಾರ್ ತಳಿಯ ಜೋಡೆತ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಈ ಎತ್ತುಗಳು ಜಾತ್ರೆಯಲ್ಲಿ ಗಮನ ಸೆಳೆಯುತ್ತಿವೆ. ದರ್ಶನ್ ಪುಟ್ಟಣ್ಣಯ್ಯ ಶಾಸಕರಾಗಿ ಆಯ್ಕೆಯದ ಬಳಿಕ ಜಾತ್ರೆ ಬಗ್ಗೆ ವಿಶೇಷ ಕಾಳಿಜಿ ವಹಿಸಿರುವ ಪರಿಣಾಮ ಈ ಹಿಂದಿಗಿಂತಲೂ ಹೆಚ್ಚು ರಾಸುಗಳು ಜಾತ್ರೆಗೆ ಆಗಮಿಸುತ್ತಿವೆ. ಇದು ಸಂತಸದ ವಿಚಾರ ಎಂದು ರೈತ ಶ್ಯಾದನಹಳ್ಳಿ ಚಲುವರಾಜು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾ.6 ರಂದು ಜಾತ್ರೆ ಮುಕ್ತಾಯಗೊಳ್ಳಲಿದೆ. ಉತ್ತಮ ಜೊಡೆತ್ತುಗಳ ಆಯ್ಕೆ ಮಾ.5ರಂದು ನಡೆಯಲಿದೆ. ಅದೇ ದಿನ ಮಾದೇಶ್ವರ ಮತ್ತು ಸಿದ್ದೇಶ್ವರರ ರಥೋತ್ಸವ ನಡೆಯಲಿದೆ. ಮರು ದಿನ ಆಯ್ಕೆಯಾದ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಹಾಗೂ ರಾತ್ರಿ ತೆಪ್ಪೋತ್ಸವ ಜರುಗಲಿದೆ.

2024ರಲ್ಲಿ ಬೇಬಿ ಬೆಟ್ಟದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ನಟ ದರ್ಶನ್ ತೂಗುದೀಪ ಅವರು ಜಾತ್ರೆಯ ವಿಶೇಷತೆ ಕಂಡು ಸಂತಸ ವ್ಯಕ್ತಪಡಿಸುವ ಜತೆಗೆ ಮುಂದಿನ ವರ್ಷ ತಾವು ಕೂಡ ಜೋಡೆತ್ತುಗಳನ್ನು ಪ್ರರ್ಶನಕ್ಕಿಡುವುದಾಗಿ ಹೇಳಿದ್ದರು. ಅದರಂತೆ ಈ ವರ್ಷ ಗುಜರಾತ್ ಮೂಲದ ಕಾಂಕ್ರೋಚ್ ತಳಿಯ 20 ಲಕ್ಷ ರೂ.ಬೆಲೆಬಾಳುವ ಆರು ಹಲ್ಲುಗಳ ರಾಮ, ಲಕ್ಷ್ಮಣ ಎಂಬ ಹೆಸರಿನ ಜೋಡೆತ್ತುಗಳನ್ನು ಪ್ರದರ್ಶಕ್ಕೆ ಕಳುಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net