ಬೇಡ್ತಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಚಿವ ಸಂಪುಟ ಅಸ್ತು

1671716580170
Published on

ಶ್ರೀಧರ ಅಣಲಗಾರ, ಯಲ್ಲಾಪುರ:

ಯಲ್ಲಾಪುರ ಹಾಗೂ ಮುಂಡಗೋಡ ತಾಲೂಕಿನ ನಾಲ್ಕು ಗ್ರಾ.ಪಂ ವ್ಯಾಪ್ತಿಯ ಸುಮಾರು 100 ಕೆರೆಗಳಿಗೆ ಬೇಡ್ತಿ ನದಿಯಿಂದ ನೀರು ತುಂಬಿಸುವ 274.50 ಕೋಟಿ ರೂ ವೆಚ್ಚದ ನೀರಾವರಿ ಯೋಜನೆಗೆ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ. 

   ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಅವರ ಶ್ರಮದಿಂದ ಈ ಯೋಜನೆ ಮಂಜೂರಾಗಿದ್ದು, ಯಲ್ಲಾಪುರ ತಾಲೂಕಿನ ಕಿರವತ್ತಿ, ಮದನೂರು ಹಾಗೂ ಮುಂಡಗೋಡ ತಾಲೂಕಿಮ ಮೈನಳ್ಳಿ, ಗುಂಜಾವತಿ ಗ್ರಾ.ಪಂ ವ್ಯಾಪ್ತಿಯ ರೈತರಿಗೆ ನೀರಿನ ಸಮಸ್ಯೆ ದೂರವಾಗಲಿದೆ. 

   ಈ ಮೊದಲು ಮುಂಡಗೋಡ ಮತ್ತು ಬನವಾಸಿಯಲ್ಲಿ ವಿವಿಧ ನೀರಾವರಿ ಯೋಜನೆಗಳ ಜಾರಿಗೆ ತಂದಿದ್ದರು. ಮುಂಡಗೋಡ ತಾಲೂಕಿನ ನೀರಾವರಿ ಯೋಜನೆ ಸದ್ಯ ಅಂತಿಮ ಹಂತದಲ್ಲಿದೆ. ಬನವಾಸಿಯ ವರದಾ ನದಿಯಿಂದ ಕೆರೆಗೆ ನೀರು ತುಂಬಿಸುವ ಯೋಜನೆಯು ಕೆಲವು ತಿಂಗಳುಗಳಲ್ಲಿ ಉದ್ಘಾಟನೆಗೊಂಡು ರೈತರಿಗೆ ಅನುಕೂಲವಾಗಿವೆ. ಇದೀಗ ಯಲ್ಲಾಪುರ ತಾಲೂಕಿನ ರೈತರಿಗೂ ನೆರವಾಗುವಂತೆ ಯೋಜನೆಯನ್ನು ಪರವಾಗಿ ಕಾರ್ಯರೂಪಕ್ಕೆ ತರುತ್ತಿದ್ದಾರೆ. 

    ಯೋಜನೆಯಿಂದ ನೀರಿಗಾಗಿ ಮಳೆಯನ್ನೇ ರೈತರು ಆಶ್ರಯಿಸಬೇಕಾದ ಚಿಂತೆ ದೂರವಾಗಿದೆ. ಮಳೆಗಾಲದಲ್ಲಿ ನಿರೀಕ್ಷೆಯಂತೆ ಮಳೆ ಬಾರದೇ ಇದ್ದರೂ ಬೆಳೆ ಬೆಳೆಯುವುದಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ವಾಣಿಜ್ಯ ಬೆಳೆಗಳಾದ ಕಬ್ಬು, ಹತ್ತಿ , ಅಡಕೆ, ಗೋವಿನ ಜೋಳ ಮುಂತಾದ ವಾಣಿಜ್ಯ ಬೆಳೆಗಳೂ ಸಹ ಮಳೆಯ ಕಾರಣದಿಂದ ನಷ್ಟವಾಗುವುದು ತಪ್ಪಲಿದೆ.  

* ಸರಿಯಾದ ನೀರಾವರಿ ಯೋಜನೆಗಳಿಲ್ಲದೆ ಸಾವಿರಾರು ಅನ್ನದಾತರಿಗೆ ಕಷ್ಟವಾಗಿತ್ತು. ಇದನ್ನು ಮನಗಂಡು ಸರ್ಕಾರದ ಮುಂದೆ ಹಲವು ಯೋಜನೆಗಳನ್ನು ಇಡಲಾಗಿತ್ತು. ಸರ್ಕಾರ ಎಲ್ಲಾ ಯೋಜನೆಗಳಿಗೆ ಒಳ್ಳೆಯ ರೀತಿಯಲ್ಲಿ ಸ್ಪಂದಿಸುತ್ತಾ ಬಂದಿದೆ. ಈ ನೀರಾವರಿ ಯೋಜನೆಗಳಿಂದ ರೈತರ ಬಾಳಿನಲ್ಲಿ ಹೊಸ ಭರವಸೆ ಮೂಡಲಿದೆ. ಸಾಕಷ್ಟು ನೀರು ಸಿಕ್ಕರೆ ರೈತರು ಆರ್ಥಿಕ ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗುತ್ತಾರೆ. ರೈತರು ಸಬಲರಾದರೆ ಮಾತ್ರ ದೇಶ ಸಶಕ್ತವಾಗುತ್ತದೆ. ಅಧಿಕಾರದಲ್ಲಿರುವವರೆಗೂ ರೈತರ ಪರವಾಗಿ ಕೆಲಸ ಮಾಡುತ್ತೇನೆ. ಒಳ್ಳೆಯ ಯೋಜನೆ ಜಾರಿ ಮಾಡಿ ರೈತರಿಗೆ ಬಲ ನೀಡುವ ಪ್ರಯತ್ನ ಮಾಡುತ್ತೇನೆ. 

ಶಿವರಾಮ ಹೆಬ್ಬಾರ 

ಕಾರ್ಮಿಕ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net