ಬೇಡಿಕೆಗಳ ಈಡೇರಿಕೆಗಾಗಿ ರೈತರಿಂದ ರಸ್ತೆತಡೆ

10blrp1
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ ಸಂಘ, ಹಸಿರು ಸೇನೆ, ಕಾಫಿ ಬೆಳೆಗಾರರ ಸಂಘದ ಸದಸ್ಯರು ಸೋಮವಾರ ಬಸವೇಶ್ವರ ವೃತ್ತದಲ್ಲಿ ರಸ್ತೆತಡೆ ನಡೆಸಿದರು. ಕುಮಾರ್, ಬಸವರಾಜು, ಮೋಕ್ಷರಾಜು, ಚಂದ್ರಶೇಖರ್, ಪುಟ್ಟಪ್ಪೇಗೌಡ, ಶ್ರೀನಿವಾಸ್ ಇತರರು ಇದ್ದರು.
Published on

ಬೇಲೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ ಸಂಘ, ಹಸಿರು ಸೇನೆ, ಕಾಫಿ ಬೆಳೆಗಾರರ ಸಂಘದ ಸದಸ್ಯರು ಸೋಮವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆತಡೆ ನಡೆಸಿದರಲ್ಲದೆ, ತಾಲೂಕು ಕಚೇರಿಗೆ ತೆರಳಿ ಧರಣಿ ನಡೆಸಿದರು.

ಬಸವೇಶ್ವರ ವೃತ್ತದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸ್ವಾಮಿಗೌಡ, ಹಿಂದಿನ ಬಿಜೆಪಿ ಸರ್ಕಾರ ವಿಧಾನಸಭೆ ಸದನದಲ್ಲಿ ಕಾಫಿ ಬೆಳೆಗಾರರಿಗೆ 10 ಎಚ್‌ಪಿವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಮತ್ತು ಬಾಕಿ ಬಿಲ್ ಮನ್ನಾ ಮಾಡುವುದಾಗಿ ಘೋಷಿಸಿದರೂ ಸರ್ಕಾರಿ ಆದೇಶ ಹೊರಡಿಸದೆ ರೈತರು, ಬೆಳೆಗಾರರಿಗೆ ವಂಚಿಸಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಕಾಫಿ ಬೆಳೆಗಾರರು ಬಳಸಿರುವ ಪಂಪ್‌ಸೆಟ್‌ಗಳ ಬಿಲ್ ಕಟ್ಟಿಲ್ಲ ಎಂದು ಮನೆಗಳ ವಿದ್ಯುತ್ ಸಂಪರ್ಕವನ್ನೂ ಕಡಿತ ಮಾಡುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಹಿಂದಿನ ಸರ್ಕಾರ ಘೋಷಿಸಿದಂತೆ ಉಚಿತ ವಿದ್ಯುತ್ ಸರಬರಾಜು ಮಾಡುವ ಸಲುವಾಗಿ ತಕ್ಷಣವೇ ಈಗಿನ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಬೇಕು. ಹಿಂದಿನ ಬಿಜೆಪಿ ಸರ್ಕಾರ ಮಾಡಿದಂತೆ ರೈತರಿಗೆ ವಂಚನೆ ಮಾಡದೆ ತಕ್ಷಣವೇ ಯೋಜನೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ದೂರಿ ಕುಮಾರ್ ಮಾತನಾಡಿ, ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂಧನ ಸಚಿವರಾಗಿದ್ದ ಸುನೀಲ್ ಕುಮಾರ್, ಹತ್ತು ವರ್ಷದ ಎಲ್ಲ ಬಾಕಿ ವಿದ್ಯುತ್ ಬಿಲ್ ಮನ್ನಾ ಮಾಡಿದ್ದೇವೆ ಎಂದಿದ್ದರು. ಆದರೆ ಈಗಿನ ಸರ್ಕಾರ ನೋಡಿದರೆ ಬಿಲ್ ಕಟ್ಟಿಲ್ಲ ಎಂದು ಪಂಪ್‌ಸೆಟ್, ಮನೆಯ ವಿದ್ಯುತ್ ಸಂಪರ್ಕ ಕಟ್ ಮಾಡುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಮಂದೆ ಹಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ. ಕಾಫಿ ಬೆಳೆಗಾರರಿಗೂ ಉಚಿತ ವಿದ್ಯುತ್ ನೀಡಬೇಕು ಎಂದರು.

ರೈತ ಸಂಘದ ತಾಲೂಕು ಅಧ್ಯಕ್ಷ ಭೋಗ ಮಲ್ಲೇಶ್ ಮಾತನಾಡಿ, ತಾಲೂಕಿನಲ್ಲಿ ಅಧಿಕಾರಿಗಳು ರೈತರಿಗೆ ಸಾಗುವಳಿ ಚೀಟಿ ಆಧಾರದ ಮೇಲೆ ಹಕ್ಕು ದಾಖಲಿಸಿ ಖಾತೆ, ಪಹಣಿ ಮಾಡಿಕೊಡದೆ ಅಲೆದಾಡಿಸುತ್ತಿದ್ದಾರೆ. ಇದರಿಂದಾಗಿ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. 20-30 ವರ್ಷದಿಂದ ಉಳುಮೆ ಮಾಡುವರು ಪರದಾಡುತಿದ್ದಾರೆ. ಅಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲ. ವೈದ್ಯರಿಲ್ಲ. ಕೆಲ ವೈದ್ಯರು ಸ್ಕ್ಯಾನಿಂಗ್ ಹೆಸರಲ್ಲಿ ರೋಗಿಗಳನ್ನು ಚಿಕ್ಕಮಗಳೂರು-ಹಾಸನಕ್ಕೆ ಕಳುಹಿಸುವ ಮೂಲಕ ಬಡವರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದೇ ವೇಳೆ ವಿವಿಧ ಬೇಡಿಕೆ ಈಡೇರಿಸುವಂತೆ ತಹಸೀಲ್ದಾರ್ ಎಂ.ಮಮತಾ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕುಮಾರ್, ತಾಲೂಕು ಕಾರ್ಯದರ್ಶಿ ಬಸವರಾಜು, ಸಂಚಾಲಕ ಮೋಕ್ಷರಾಜು, ಸಹ ಕಾರ್ಯದರ್ಶಿ ಚಂದ್ರಶೇಖರ್, ಮುಖಂಡರಾದ ಪುಟ್ಟಪ್ಪೇಗೌಡ, ಶ್ರೀನಿವಾಸ್, ಧರ್ಮೇಗೌಡ, ಕರ್ಕಿಹಳ್ಳಿ ರಮೇಶ್, ಬಿರಟೇಮನೆ ಸುರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net