

ಗುಂಡ್ಲುಪೇಟೆ: ತಾಲೂಕಿನ ಬೇಗೂರು ಸಮೀಪ ಕರಡಿ ಕಾಣಿಸಿಕೊಂಡಿದ್ದು, ಸೆರೆಗೆ ಅರಣ್ಯ ಇಲಾಖೆ ಮುಂದಾಗಿದೆ.
ಗ್ರಾಮದ ಹೊರವಲಯದಲ್ಲಿರುವ ಲಿಟಲ್ ಫ್ಲವರ್ ಕಾನ್ವೆಂಟ್ ಬಳಿ ಸೋಮವಾರ ಕರಡಿ ಕಾಣಿಸಿಕೊಂಡ ಹಿನ್ನೆಲೆ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಬಫರ್ ವಲಯದ ಸಿಬ್ಬಂದಿ ಕರಡಿ ಸೆರೆಗೆ ಸಂಜೆಯವರೆಗೆ ಕಾರ್ಯಾಚರಣೆ ನಡೆಸಿದರು. ಸಮೀಪದ ಜಮೀನಿನತ್ತ ತೆರಳಿದ ಕರಡಿ ಸಂಜೆಯಾದರೂ ಕಣ್ಣಿಗೆ ಬೀಳದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಿದರು.
ಸೋಮವಾರ ರಾತ್ರಿ ಸಮೀಪದ ಬೆಳಚಲವಾಡಿ ಗ್ರಾಮದ ಸಮುದಾಯ ಭವನದ ಬಳಿ ಕರಡಿ ಕಾಣಿಸಿಕೊಂಡ ಕೂಡಲೇ ಗ್ರಾಮಸ್ಥರು ಗದ್ದಲ ಮಾಡಿದ್ದಾರೆ. ಇದರಿಂದ ಕರಡಿ ಕೋಟೆಕೆರೆಯತ್ತ ಹೋಗಿದೆ. ಪಕ್ಕದಲ್ಲಿಯೇ ಮಂಚಹಳ್ಳಿ ಗುಡ್ಡವಿದ್ದು ಕರಡಿ ಅತ್ತ ಹೋಗಿರಬಹುದು. ಕಂಡು ಬಂದರೆ ಸೆರೆಹಿಡಿಯಲು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಬಫರ್ ವಲಯದ ಪ್ರಭಾರ ಆರ್‌ಎಫ್‌ಒ ಶಿವಕುಮಾರ್ ‘ವಿಜಯವಾಣಿ’ಗೆ ತಿಳಿಸಿದರು.