ಬೆಳೆ ಹರಗುತ್ತಿರುವ ರೈತರು

25GTL1B
Published on

ಗುತ್ತಲ: ಉತ್ತಮ ಮಳೆ ನಿರೀಕ್ಷೆಯಲ್ಲಿ ವಿವಿಧ ಬೀಜಗಳನ್ನು ಬಿತ್ತನೆ ಮಾಡಿದ್ದ ರೈತರು ಇದೀಗ ಮಳೆ ಕೈಕೊಟ್ಟಿದ್ದರಿಂದ ಬಾಡುತ್ತಿರುವ ಪೈರನ್ನು ಅನಿವಾರ್ಯವಾಗಿ ನಾಶಪಡಿಸುತ್ತಿದ್ದಾರೆ.

ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದ್ದರಿಂದ ಭೂಮಿ ಹಸನು ಮಾಡಿಕೊಂಡಿದ್ದ ರೈತರು, ಮೇನಲ್ಲಿ ಸುರಿದ ಅಲ್ಪ ಮಳೆಗೆ ಮೆಕ್ಕೆಜೋಳ, ಸೋಯಾಬೀನ್, ಶೇಂಗಾ ಬೀಜಗಳನ್ನು ಬಿತ್ತನೆ ಮಾಡಿದ್ದರು. ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಆರಂಭವಾಗುತ್ತದೆ ಎಂದು ಹವಾಮಾನ ಇಲಾಖೆಯ ಮಾಹಿತಿ ನೀಡಿತ್ತು. ಆದರೆ, ಜೂನ್ ಅಂತ್ಯವಾಗುತ್ತ ಬಂದರೂ ಮಳೆ ಸುರಿಯಲಿಲ್ಲ. ಪೈರು ಮಳೆಯಿಲ್ಲದೆ ಒಣಗುತ್ತಿರುವುದರಿಂದ ಅದನ್ನು ಹರಗಿ, ಪುನಃ ಮಳೆ ಬಂದ ನಂತರ ಬಿತ್ತನೆ ಮಾಡಿದರಾಯಿತು ಎಂದು ನಿತ್ಯವೂ ನೂರಾರು ರೈತರು ಬೆಳೆ ನಾಶಪಡಿಸುತ್ತಿದ್ದಾರೆ.

ಪ್ರಮುಖವಾಗಿ ವಾಣಿಜ್ಯ ಬೆಳೆಗಳಾದ ಮೆಕ್ಕೆಜೋಳ ಹಾಗೂ ಸೋಯಾ ಪ್ರಖರ ಬಿಸಿಲಿಗೆ ಒಣಗುತ್ತಿದೆ. ಶೇಂಗಾ ಬೆಳೆಗೆ ತೇವಾಂಶ ಕಡಿಮೆಯಾಗಿ ಶಿಲೀಂದ್ರ (ಬೂಸ್ಟ್) ತಗುಲಿ ಹಾನಿಯಾಗುತ್ತಿದೆ. ಹೀಗಾಗಿ ರೈತರು ಬೆಳೆಗಳನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸುತ್ತಿದ್ದಾರೆ.

ಗುತ್ತಲ ಹೋಬಳಿಯಲ್ಲಿ ಸುಮಾರು 750337 ಎಕರೆ ಪ್ರದೇಶ ಕೃಷಿ ಸಾಗುವಳಿ ಭೂಮಿಯಿದ್ದು, ಅದರಲ್ಲಿ 36940 ಎಕರೆ ಪ್ರದೇಶ ಮುಂಗಾರು ಬಿತ್ತನೆಯ ಕ್ಷೇತ್ರವಿದೆ. ಈಗಾಗಲೇ ಮೆಕ್ಕೆಜೋಳ 17788 ಎಕರೆ, ಸೋಯಾ 116 ಎಕರೆ ಹಾಗೂ ಶೇಂಗಾ 734 ಎಕರೆ ಪ್ರದೇಶ ಬಿತ್ತನೆಯಾಗಿದೆ. ಇದರಲ್ಲಿ ಮೆಕ್ಕೆಜೋಳ ಶೇ. 85ಕ್ಕೂ ಹೆಚ್ಚು ಹಾನಿಯಾಗಿದ್ದು, ಶೇ. 40ರಷ್ಟು ಬೆಳೆಯನ್ನು ರೈತರು ನಾಶಪಡಿಸಿದ್ದಾರೆ. ಸೋಯಾ ಶೇ. 100 ಹಾನಿಯಾಗಿದೆ. ಇದರಲ್ಲಿ ಶೇ. 95ರಷ್ಟು ಬೆಳೆ ನಾಶ ಮಾಡಲಾಗಿದೆ. ಶೇಂಗಾ ಬೆಳೆ ಶೇ. 65ರಷ್ಟು ಹಾನಿಯಾಗಿದ್ದು ಶೇ. 25ರಷ್ಟು ಬೆಳೆಯನ್ನು ನಾಶ ಮಾಡಲಾಗಿದೆ. ಇನ್ನು 2-3 ದಿನಗಳಲ್ಲಿ ಮಳೆ ಬಾರದಿದ್ದರೆ ಇನ್ನಷ್ಟು ರೈತರು ಬೆಳೆ ನಾಶ ಮಾಡುವುದಾಗಿ ತಿಳಿಸಿದ್ದಾರೆ. ಒಟ್ಟಾರೆ ಮುಂಗಾರು ಮಳೆ ಸಮರ್ಪಕವಾಗಿ ಬೀಳದ ಕಾರಣ ರೈತರು ಚಿಂತಿತರಾಗಿದ್ದು, ಮಳೆ ಯಾವಾಗ ಬರುತ್ತದೋ ಎಂದು ಮುಗಿಲ ಕಡೆ ಮುಖ ಮಾಡಿದ್ದಾರೆ.

12 ಎಕರೆ ಪ್ರದೇಶದಲ್ಲಿ ಬೆಳೆದ ಸೋಯಾ ಬೆಳೆಯನ್ನು ಗುರುವಾರ ನಾಶಪಡಿಸಿದ್ದೇವೆ. ಸಕಾಲಕ್ಕೆ ಮಳೆಯಾಗಿದ್ದರೆ ಉತ್ತಮ ಬೆಳೆ ಬರುತ್ತಿತ್ತು. ಪ್ರತಿ ಎಕರೆಗೆ ಸಾವಿರಾರು ರೂಪಾಯಿ ವೆಚ್ಚ ಮಾಡಿ ಬಿತ್ತಿದ ಬೆಳೆ ನಾಶಪಡಿಸಲು ಮನಸ್ಸು ಒಪ್ಪುತ್ತಿಲ್ಲ. ಆದರೂ ಮುಂದೆ ಮಳೆ ಬಂದರೆ ಅನ್ಯ ಬೆಳೆ ಬೆಳೆಯಲು ಭೂಮಿ ಸಿದ್ಧಪಡಿಸಿಕೊಳ್ಳಲು ಬೆಳೆ ನಾಶಪಡಿಸಲಾಗಿದೆ.| ಗುರುಸಿದ್ಧ ಸ್ವಾಮೀಜಿ, ಕಲ್ಮಠ ಗುತ್ತಲಮುಂಗಾರು ಮಳೆ ಸಮರ್ಪಕವಾಗಿ ಬೀಳದ ಪರಿಣಾಮ ಬಹುತೇಕ ರೈತರು ಬೆಳೆ ನಾಶ ಪಡಿಸುತ್ತಿದ್ದಾರೆ. ಸೋಯಾ, ಮೆಕ್ಕೆಜೋಳ, ಶೇಂಗಾ ಬೆಳೆಗಳು ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯದ ಕಾರಣ ನಾಶ ಪಡಿಸಿರುವುದಾಗಿ ರೈತರು ತಿಳಿಸಿದ್ದಾರೆ.| ಪುಟ್ಟರಾಜ ಹಾವನೂರ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಗುತ್ತಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net