ಬೆಳೆ ಸಮೀಕ್ಷೆ ರಾಜ್ಯದ ಉತ್ಸವವಾಗಲಿ

13-hvr-09
Published on

ಹಾವೇರಿ: ಬೆಳೆ ಸಮೀಕ್ಷೆ ಕಾರ್ಯವನ್ನು ಒಂದು ಉತ್ಸವದ ಮಾದರಿಯಲ್ಲಿ ಕೈಗೊಳ್ಳಬೇಕು. ಎಲ್ಲ ಅಧಿಕಾರಿಗಳು, ರೈತರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಬೆಂಗಳೂರನ ಕೃಷಿ ಇಲಾಖೆಯ ಸಮೃದ್ಧಿ ಸಭಾಂಗಣದಿಂದ ಜಿಲ್ಲಾಡಳಿತದೊಂದಿಗೆ ಗುರುವಾರ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.

ಬೆಳೆ ಸಮೀಕ್ಷೆ ಕಾರ್ಯ ಕೇವಲ ಕೃಷಿ ಇಲಾಖೆ ಕಾರ್ಯವೆಂದು ಭಾವಿಸದೇ ಎಲ್ಲ ಇಲಾಖೆ ಅಧಿಕಾರಿಗಳು ಭಾಗವಹಿಸಿ ಸಮೀಕ್ಷೆಯನ್ನು ಆಯಾ ರೈತರಿಂದಲೇ ಮಾಡಿಸಿ ಅಪ್​ಲೋಡ್ ಮಾಡಿಸಬೇಕು ಎಂದು ಸೂಚಿಸಿದರು.

ಈ ವರ್ಷ ಬೆಳೆ ಸಮೀಕ್ಷೆಯನ್ನು ವಿಶಿಷ್ಟ ರೀತಿಯಲ್ಲಿ ನಡೆಸಲಾಗುತ್ತಿದೆ. ಈವರೆಗೆ ಅಧಿಕಾರಿಗಳು ಹಾಗೂ ಪ್ರತಿನಿಧಿಗಳು ರೈತರ ಬೆಳೆಗಳನ್ನು ಮೊಬೈಲ್ ಆಪ್​ಗಳಲ್ಲಿ ಅಪ್​ಲೋಡ್ ಮಾಡುತ್ತಿದ್ದರು. ಈ ವರ್ಷ ತನ್ನ ಬೆಳೆಯನ್ನು ತಾನೇ ಫೋಟೋ ತೆಗೆದು ವಿಮಾ ಆಪ್​ನಲ್ಲಿ ರೈತನೇ ಅಪ್​ಲೋಡ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಸ್ವಾಭಿಮಾನಿ ರೈತ ತನ್ನ ಹೊಲದ ಸಮೀಕ್ಷೆಯನ್ನು ತಾನೇ ನಡೆಸಿ ತನ್ನ ಬೆಳೆಯ ಬಗ್ಗೆ ಸರ್ಟಿಫಿಕೇಟ್ ಕೊಡುವಂತಹ ವಿಶೇಷ ಯೋಜನೆ ಇದು. ಎಲ್ಲ ಕೃಷಿ ಸಹಾಯಕ ನಿರ್ದೇಶಕರು ಸ್ಥಳೀಯ ಶಾಸಕರನ್ನು ರೈತರ ಹೊಲಕ್ಕೆ ಕರೆದುಕೊಂಡು ಹೋಗಿ ರೈತರಿಂದಲೇ ಬೆಳೆ ಸಮೀಕ್ಷೆ ಫೋಟೋ ಅಪ್​ಲೋಡ್ ಮಾಡಿಸಬೇಕು. ತೋಟಗಾರಿಕೆ ಮತ್ತು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳು, ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಬೆಳೆವಿಮೆ ಸಮೀಕ್ಷೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಕೋವಿಡ್ ರಜೆಯ ಕಾರಣ ಕೃಷಿ ವಿವಿಯ ವಿದ್ಯಾರ್ಥಿಗಳು ತಮ್ಮ ಗ್ರಾಮಗಳಲ್ಲಿ ವಾಸ್ತವ್ಯವಿದ್ದು, ಇವರ ಮೊಬೈಲ್ ಸಂಖ್ಯೆ ಬಳಸಿ ವಾಟ್ಸ್ ಆಪ್ ಗ್ರೂಪ್ ಬಳಸಿ ಬೆಳೆ ಸಮೀಕ್ಷೆ ಕುರಿತು ರೈತರಿಗೆ ನೆರವಾಗಲು ಬಳಸಿಕೊಳ್ಳಿ ಎಂದರು.

ಬೆಳೆ ಸಮೀಕ್ಷೆ ಕುರಿತು ಗ್ರಾಮವಾರು ಪಿಆರ್​ಗಳನ್ನು ನೇಮಿಸಬೇಕು. ತ್ವರಿತವಾಗಿ ಇವರಿಗೆ ತರಬೇತಿ ನೀಡಿ ರೈತರಿಗೆ ನೆರವಾಗಲು ಕ್ರಮ ವಹಿಸಬೇಕು. ಪ್ರತಿ ಗ್ರಾಮದಲ್ಲಿ ಡಂಗೂರದ ಮೂಲಕ ರೈತರಿಗೆ ಬೆಳೆ ಸಮೀಕ್ಷೆ ಮಾಹಿತಿ ನೀಡಬೇಕು ಎಂದರು. ರಾಜ್ಯದಲ್ಲಿ 2.10 ಕೋಟಿ ರೈತರಿದ್ದಾರೆ. ಇದರಲ್ಲಿ ಮುಖ್ಯ ಹಿಡುವಳಿದಾರರ ಜತೆಗೆ ಹಿಸ್ಸಾ ಜಮೀನಿನ ರೈತರು ಬೆಳೆ ಸಮೀಕ್ಷೆ ಅಪ್​ಲೋಡ್ ಮಾಡಲು ಅವಕಾಶ ಕಲ್ಪಿಸಬೇಕು. ಫಾರ್ಮರ್ ಕ್ರಾಪ್ ಸರ್ವೆ ಆಪ್ ಬಳಸಿ ರೈತರೇ ತಮ್ಮ ಹೊಲದಲ್ಲಿ ನಿಂತು ಬೆಳೆಯೊಂದಿಗೆ ತಮ್ಮ ಫೋಟೋ ಕ್ಲಿಕ್ಕಿಸಿ ಅಪ್​ಲೋಡ್ ಮಾಡಬೇಕು. ಆ. 24ರಂದು ಕೊನೆಯ ದಿನವಾಗಿದೆ. ಈ ಅವಧಿಯೊಳಗೆ ಜಿಲ್ಲೆಯ ಎಲ್ಲ ರೈತರು ಅಪ್​ಲೋಡ್ ಮಾಡಬೇಕು ಎಂದು ತಿಳಿಸಿದರು. ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಸಿಇಒ ರಮೇಶ ದೇಸಾಯಿ, ಕೃಷಿ ಜಂಟಿ ನಿರ್ದೇಶಕ ಬಿ. ಮಂಜುನಾಥ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ. ಪ್ರದೀಪ, ಕರಿಯಲ್ಲಪ್ಪ ಡಿ.ಕೆ., ಸ್ಪೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net