ಬೆಳೆ ಸಮೀಕ್ಷೆ ಆಪ್​ಗೆ ಶಾಸಕ ಬಳ್ಳಾರಿ ಚಾಲನೆ

14 byd1
Published on

ಬ್ಯಾಡಗಿ: ರೈತರು ಸರ್ಕಾರದ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಕೃಷಿಯಿಂದ ಲಾಭ ಪಡೆಯಲು ಸಾಧ್ಯ. ಕೃಷಿ ಇಲಾಖೆ ನಿರ್ದೇಶನ ಹಾಗೂ ಸಲಹೆಗಳನ್ನು ಪಡೆದುಕೊಂಡಲ್ಲಿ ಕೃಷಿಯಲ್ಲಿ ಯಶಸ್ಸು ಸಾಧ್ಯವಾಗಲಿದೆ ಎಂದು ಶಾಸಕ ವೀರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು.

ಪಟ್ಟಣದ ಕೃಷಿ ಇಲಾಖೆ ಕಾರ್ಯಾಲಯದ ಎದುರು ಗುರುವಾರ ಬೆಳೆ ಸಮೀಕ್ಷೆ ಆಪ್​ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಹಿಂದೆ ರೈತರು ಬೆಳೆ ವಿಮೆ, ಬೆಳೆ ಪರಿಹಾರ ಪಡೆಯಲು ಸಾಕಷ್ಟು ಹರಸಾಹಸಪಡುವ ಪರಿಸ್ಥಿತಿಯಿತ್ತು. ಸಿಬ್ಬಂದಿ, ತಾಂತ್ರಿಕ ಸಮಸ್ಯೆಗಳಿಂದ ರೈತರು ಸೌಲಭ್ಯ ಪಡೆಯಲು ತೊಂದರೆ ಅನುಭವಿಸಿದ ಸಾಕಷ್ಟು ಕ್ಷಣಗಳನ್ನು ಕಂಡಿದ್ದೇವೆ. ಇನ್ಮುಂದೆ ರೈತರು ಮೊಬೈಲ್​ಗಳಲ್ಲಿ ಬೆಳೆ ಸಮೀಕ್ಷೆ ಆಪ್ ಡೌನ್​ಲೋಡ್ ಮಾಡಿಕೊಂಡು, ತಮ್ಮ ಹೊಲಗಳಲ್ಲಿ ತಾವೇ ನಿಂತು ಬೆಳೆಯ ಫೋಟೋ ಅಪ್​ಲೋಡ್ ಮಾಡಬೇಕು. ಆಪ್​ನಲ್ಲಿ ಕೇಳಿದ ಎಲ್ಲ ಮಾಹಿತಿಗಳನ್ನು ಅಪಲೋಡ್ ಮಾಡಬೇಕು. ಇದರಿಂದ ಯಾರ ಹಸ್ತಕ್ಷೇಪವಿಲ್ಲದೆ ತಮ್ಮ ಬೆಳೆಗಳಿಗೆ ಸೌಲಭ್ಯ ಪಡೆಯಬಹುದು. ಬ್ಯಾಂಕ್ ಸಾಲ, ಬೆಳೆ ಪರಿಹಾರ, ವಿಮೆ ಇತ್ಯಾದಿಗಳಿಗೆ ಅನುಕೂಲವಾಗಲಿದೆ ಎಂದರು.

ಕೃಷಿ ಸಹಾಯಕ ನಿರ್ದೇಶಕ ಬಸವರಾಜ ಮರಗಣ್ಣನವರ ಮಾತನಾಡಿ, ರೈತರು ಸಣ್ಣಪುಟ್ಟ ಸಮಸ್ಯೆಗಳಿಗೆ ಕಚೇರಿ ಅಲೆದಾಡದಂತೆ ಎಚ್ಚರಿಕೆ ವಹಿಸಿದ್ದೇವೆ. ಆನ್​ಲೈನ್, ವಾಟ್ಸಾಪ್, ಮಾಧ್ಯಮಗಳ ಮೂಲಕ ಸಮರ್ಪಕ ಮಾಹಿತಿ ನೀಡುತ್ತಿದ್ದೇವೆ. ಪೋನ್​ನಲ್ಲಿ ಸಾಕಷ್ಟು ಮಾಹಿತಿ ನೀಡುವ ಮೂಲಕ ಅನುಕೂಲ ಕಲ್ಪಿಸಿದ್ದೇವೆ. ಸಣ್ಣಪುಟ್ಟ ಸಮಸ್ಯೆಗಳಿಗೆ ಕಚೇರಿಗೆ ಬಾರದೆ, ಮೊಬೈಲ್ ಮೂಲಕ ಇತ್ಯರ್ಥಪಡಿಸುತ್ತಿದ್ದೇವೆ. ಬೆಳೆಹಾನಿ, ಬೆಳೆವಿಮೆ ಹಾಗೂ ಪರಿಹಾರ ಕುರಿತು ಸರ್ಕಾರದ ನಿರ್ದೇಶನಗಳನ್ನು ಪಾಲಿಸಲಾಗುತ್ತಿದೆ. ಕೃಷಿ ಇಲಾಖೆ ಸಿಬ್ಬಂದಿ ಹೊಲಕ್ಕೆ ತೆರಳಲು ಕಷ್ಟವಾಗಿತ್ತು, ಹೀಗಾಗಿ ಇಲಾಖೆ ಹೊಸ ಬೆಳೆ ಸಮೀಕ್ಷೆ ಆಪ್ ಜಾರಿಗೊಳಿಸಿದೆ ಎಂದರು.

ಈ ವೇಳೆ ರಾಣೆಬೆನ್ನೂರು ಕೃಷಿ ನಿರ್ದೇಶಕಿ ಜಿ.ಎಸ್. ಸ್ಪೂರ್ತಿ, ತಹಸೀಲ್ದಾರ್ ಶರಣವ್ವ ಕಾರಿ, ವೀರೇಂದ್ರ ಶೆಟ್ಟರ, ವಿನಯ ಹಿರೇಮಠ, ಶಿವಯೋಗಿ ಗಡಾದ, ಕೃಷಿ ಅಧಿಕಾರಿ ಆರ್.ಮಂಜುನಾಥ, ಸುರೇಶ ನಾಯಕ, ಮಾರುತಿ ದೊಡ್ಡಮನಿ, ಅಣ್ಣಪ್ಪ ದೊಡ್ಡಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net