

ರಾಮನಗರ : ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2025-26ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಪ್ರಕೃತಿ ವಿಕೋಪ ಹಾಗೂ ರೋಗ ಬಾಧೆಯಿಂದ ನಷ್ಟ ಪರಿಹಾರ ನೀಡಲು ಬೆಳೆ ವಿಮೆಗೆ ನೋಂದಣಿ ಪ್ರಾರಂಭವಾಗಿದೆ.
ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರಿಬ್ಬರೂ ವಿಮೆ ಮಾಡಿಸಬಹುದು. ಬೆಳೆ ಸಾಲ ಪಡೆದ ರೈತರು ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸದಿದ್ದಲ್ಲಿ, ಬ್ಯಾಂಕ್ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳ ಮೊದಲೇ ಲಿಖಿತವಾಗಿ ಮುಚ್ಚಳಿಕೆ ಪತ್ರ ನೀಡಬೇಕು.
ವಿಮೆಗೆ ಅರ್ಹ ಬೆಳೆಗಳು:
ರಾಗಿ, ಭತ್ತ, ಮುಸುಕಿನ ಜೋಳ, ತೊಗರಿ, ಅಲಸಂದೆ, ಹುರುಳಿ, ಎಳ್ಳು, ಶೇಂಗಾ ಬೆಳೆಗಳು ವಿಮೆಗೆ ಅರ್ಹವಾಗಿದ್ದು, ರೈತರು ತಮ್ಮ ಜಮೀನಿನ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ಪ್ರತಿಗಳೊಂದಿಗೆ ಸಮೀಪದ ಬ್ಯಾಂಕ್ ಅಥವಾ ನಾಗರಿಕ ಸೇವಾ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು. ವಿಮೆ ಪರಿಹಾರಕ್ಕೆ ಮಳೆ ಅಭಾವದಿಂದ ಶೇ. 75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಳ್ಳುವುದು, ತೇವಾಂಶ ಕೊರತೆ, ತೀವ್ರ ಬರಗಾಲ, ಮುಳುಗಡೆ ಮುಂತಾದ ಸಮಸ್ಯೆಯಿಂದ ಬಿತ್ತನೆಯಾದ ನಂತರ ಕಟಾವಿಗೆ 15 ದಿನಗಳಿಗಿಂತ ಮೊದಲು ಬೆಳೆ ಹಾನಿಯಾಗುವುದು, ಕಟಾವು ಮಾಡಿದ ನಂತರ ಎರಡು ವಾರಗಳೊಳಗೆ ಜಮೀನಿನಲ್ಲಿ ಒಣಗಲು ಬಿಟ್ಟಂತಹ ಬೆಳೆಯು ಚಂಡಮಾರುತ, ಅಕಾಲಿಕ ಮಳೆಯಿಂದಾಗಿ ನಾಶವಾಗುವುದನ್ನು ವಿಮೆ ಭರಿಸಲಿದೆ.
ಜಿಲ್ಲೆಗೆ ವಿಮಾ ಕಂಪನಿಯಾಗಿ ಮೆ. ಓರಿಯಂಟಲ್ ಜನರಲ್ ಇನ್ಶೂರೆನ್ಸ್ ಕಂಪನಿಯು ನಿಗದಿಯಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆಗೆ ನೋಂದಾಯಿಸಿ, ಪ್ರಯೋಜನ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗೆ ಕೃಷಿ, ಕಂದಾಯ, ಸಹಕಾರ ಇಲಾಖೆ ಮತ್ತು ಬೆಳೆ ಸಾಲ ನೀಡುವ ವಾಣಿಜ್ಯ ಬ್ಯಾಂಕ್, ವಿಮಾ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಸಾಮಾನ್ಯ ಸೇವಾ ಕೇಂದ್ರಗಳನ್ನು ಅಥವಾ ರೈತರ ಸಹಾಯವಾಣಿ ಸಂಖ್ಯೆ: 18004253553 ಹಾಗೂ 18001801551 ಅನ್ನು ಸಂಪರ್ಕಿಸುವಂತೆ ಬೆಂಗಳೂರು ದಕ್ಷಿಣ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.