ಬೆಳೆ ವಿಮೆ ಪರಿಹಾರ :ಜುಲೈ 18 ರೊಳಗೆ 12.84 ಕೋಟಿ ರೂ. ಪಾವತಿಗೆ ಡಿ.ಸಿ ತಾಕೀತು

Published on

ಬೆಳೆ‌ ವಿಮೆ ಪರಿಹಾರ

ಕಲಬುರಗಿ,: ಕಳೆದ 2022-23 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ‌ ವಿಮೆ (ಸ್ಥಳೀಯ ವಿಕೋಪದಡಿ) ಮಳೆ‌ ಬಂದು‌ 4-10 ದಿನದೊಳಗೆ‌ ದೂರು ದಾಖಲಿಸಿದ ಜಿಲ್ಲೆಯ 22,217 ರೈತರಿಗೆ 12.84 ಕೋಟಿ ರೂ. ಬೆಳೆ‌ ವಿಮೆ ಪರಿಹಾರವನ್ನು ಇದೇ ಜುಲೈ 18 ರೊಳಗೆ ರೈತರಿಗೆ ಪಾವತಿಸುವಂತೆ ಯೂನಿವರ್ಸಲ್‌ ಸೊಂಪೊ ಜನರಲ್‌ ಇನ್ಶುರೆನ್ಸ್ ವಿಮಾ ಕಂಪನಿಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ವಿಮಾ‌ಸಂಸ್ಥೆಯೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಮಾ ಕಂಪನಿಯವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಒಪ್ಪಿರುವಂತೆ ವಿಮಾ‌ ಪರಿಹಾರ ನೀಡಬೇಕು ಎಂದಿದ್ದಾರೆ. ಅಲ್ಲದೆ ಸ್ಥಳೀಯ ವಿಕೋಪನಡಿ ರೈತರಿಂದ‌ ಸ್ವೀಕೃತ ದೂರುಗಳಲ್ಲಿ 8,884 ಪ್ರಕರಣಗಳನ್ನು ವಿಮಾ‌ ಕಂಪನಿ ತಿರಸ್ಕರಿಸಿದ್ದು, ಆದರೆ ದಾಖಲಾತಿಗಳನ್ನು ಪರಿಶೀಲನೆಗೆ ಸಲ್ಲಿಸಿರುವುದಿಲ್ಲ. ಒಂದು ವಾರದೊಳಗೆ ಸದರಿ ದಾಖಲಾತಿಗಳನ್ನು ಕೃಷಿ ಇಲಾಖೆಗೆ ಸಲ್ಲಿಸಿ, ಅವರಿಂದ ಪರಿಶೀಲನೆಗೊಳಪಟ್ಟ ವಿಸೃತ ವರದಿ ಸಹ ಸಲ್ಲಿಸುವಂತೆ‌ ವಿಮಾ ಕಂಪನಿಗೆ ತಿಳಿಸಿದರು.

ಇನ್ನು 2022-23ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ‌ ವಿಮೆ (ಸ್ಥಳೀಯ ವಿಕೋಪದಡಿ) ಜಿಲ್ಲೆಯಲ್ಲಿ ಒಟ್ಟು 1,18,924 ರೈತರು ದೂರು ನೀಡಿದ್ದಾರೆ. ಮಾರ್ಗಸೂಚಿ ಅನ್ವಯ 72 ಗಂಟೆಯಲ್ಲಿ ದೂರು ನೀಡಿದ 64,764 ರೈತರಿಗೆ 39.93 ಕೋಟಿ ರೂ. ಈಗಾಗಲೇ ರೈತರ ಖಾತೆಗೆ ಜಮೆಯಾಗಿದೆ ಎಂದು ಡಿ.ಸಿ. ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net