ಬೆಳೆ ನಷ್ಟಕ್ಕೆ ಪರಿಹಾರ ನೀಡುವಂತೆ ಆಗ್ರಹ

Published on

ನಾಪೋಕ್ಲು: ಅಧಿಕ ಮಳೆಯಿಂದಾಗಿ ಕಾಫಿ, ಕಾಳು ಮೆಣಸು, ಅಡಕೆ ಫಸಲು ನಷ್ಟವಾಗಿದ್ದು ಸಂಬಂಧಿಸಿದ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಕುಂಬಳದಾಳು ಗ್ರಾಮದ ಕೃಷಿಕ ನೆರವಂಡ ಜಯ ಮುತ್ತಪ್ಪ ಒತ್ತಾಯಿಸಿದ್ದಾರೆ.

ಹೊದ್ದೂರು-ಕುಂಬಳದಾಳು ಭಾಗದಲ್ಲಿ ಈ ವರ್ಷ ಹೆಚ್ಚು ಮಳೆಯಾಗಿದೆ. ಇದುವರೆಗೆ 114 ಇಂಚು ಮಳೆಯಾಗಿದೆ. ಈ ಹಿಂದೆ ನೂರು ಇಂಚಿಗೂ ಅಧಿಕ ಮಳೆಯಾದ ಸಂದರ್ಭದಲ್ಲಿ ಸರ್ಕಾರ ಬೆಳೆಗಾರರಿಗೆ ಪರಿಹಾರ ನೀಡಿದ್ದು ಈ ವರ್ಷ ಯಾವುದೆ ಪರಿಹಾರ ಲಭಿಸಿಲ್ಲ. ಪ್ರತಿದಿನ ಮಳೆಯಾಗುತ್ತಿದ್ದು ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾಫಿ ಮಂಡಳಿ ಮೂಲಕ ಉದುರಿರುವ ಕಾಫಿ, ಕಾಳು ಮೆಣಸು ಬೆಳೆಗಳ ಸರ್ವೇ ನಡೆಸಲು ಮನವಿ ಸಲ್ಲಿಸಲಾಗಿದೆ. ಶಾಸಕರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ರೈತರಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕುಂಬಳಗಾಳು ಗ್ರಾಮದ ತೆಕ್ಕಡೆ ಸುಗು ಗಣಪತಿ ಮಾತನಾಡಿ, ಕಾಫಿಗೆ ಕೊಳೆರೋಗ ಕಂಡುಬಂದಿದ್ದು ವಾರ್ಷಿಕ ಆದಾಯ ಕಡಿಮೆಯಾಗಿದೆ. ರೈತರು ಜೀವನ ನಡೆಸುವುದು ಕಷ್ಟವಾಗಿದೆ. ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕೋರಿದರು.

ಕುಂಬಳಗಾಳು ಗ್ರಾಮದ ಕೃಷಿಕರಾದ ತಕ್ಕಡೆ ಪೂರ್ಣೇಶ್ ಸೋಮಣ್ಣ , ಹೊದ್ದೂರು ಗ್ರಾಮದ ಚಟ್ಟಿಮಾಡ ಪ್ರವೀಣ, ಕುಂಬಳದಾಳು ಗ್ರಾಮದ ದೇವಜನ ವಿಖ್ಯಾತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net