

ಬೆಳಗಾವಿ: ಜಿಲ್ಲೆಯ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಮಂಗಳವಾರ ಸಣ್ಣ-ಪುಟ್ಟ ಗಲಾಟೆಗಳನ್ನು ಹೊರತುಪಡಿಸಿದರೆ ಬಹುತೇಕ ಶಾಂತಿಯುತವಾಗಿ ಮತದಾನ ನಡೆಯಿತು.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಶೇ. 71.38ರಷ್ಟು ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಶೇ. 78.51ರಷ್ಟು ದಾಖಲೆಯ ಮತದಾನವಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಶೇ.67.70, ಚಿಕ್ಕೋಡಿಯಲ್ಲಿ 75.53ರಷ್ಟು ಮತದಾನವಾಗಿತ್ತು.
ಕಳೆದ ಬಾರಿಗಿಂತ ಈ ಸಲ ಚಿಕ್ಕೋಡಿಯಲ್ಲಿ ಶೇ. 3ರಷ್ಟು ಹಾಗೂ ಬೆಳಗಾವಿಯಲ್ಲಿ ಶೇ. 4ರಷ್ಟು ಮತದಾನ ಹೆಚ್ಚಾಗಿದೆ. ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಿತು.
ಚಿಕ್ಕೋಡಿ ತಾಲೂಕಿನ ಅಂಕಲಿ ಸರ್ಕಾರಿ ಹೆಣ್ಣು ಮಕ್ಕಳ ಮರಾಠಿ ಶಾಲೆಯ ಮತಗಟ್ಟೆಯಲ್ಲಿ ಡಾ.ಪ್ರಭಾಕರ ಕೋರೆ ಅವರು ಪತ್ನಿ ಆಶಾತಾಯಿ ಕೋರೆ ಅವರೊಂದಿಗೆ ಆಗಮಿಸಿ ಮತಚಲಾಯಿಸಿದರು.
ಬೆಳಗಾವಿ ಶಿವಬಸವ ನಗರದ ಸಿದ್ದರಾಮೇಶ್ವರ ಜಿ.ಜೆ.ಯಳ್ಳೂರ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹಾಗೂ ಪುತ್ರಿ ಡಾ. ಪೂಜಾ ಕವಟಗಿಮಠ ಮತ ಚಲಾಯಿಸಿದರು.
ಬೆಳಗಾವಿ ವಿಶ್ವೇಶ್ವರಯ್ಯ ನಗರದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್, ಸಂಸದೆ ಮಂಗಲ ಅಂಗಡಿ, ಶ್ರದ್ಧಾ ಶೆಟ್ಟರ್ ಮತಚಲಾಯಿಸಿದರು.
ಬೆಳಗಾವಿ ವಿಜಯನಗರ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್‌ನ ಸದಸ್ಯ ಚನ್ನರಾಜ ಹಟ್ಟಿಹೊಳಿ , ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳ್ಕರ್ ಅವರು ಮತಚಲಾಯಿಸಿದರು.
ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ, ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ, ಪುತ್ರ ಜ್ಯೋತಿಪ್ರಸಾದ, ಸೊಸೆ ಪ್ರಿಯಾ ಮತಚಲಾಯಿಸಿದರು.
ಉಳ್ಳಾಗಡ್ಡಿ-ಖಾನಾಪುರ ಸಮೀಪದ ಹಳೇ ವಂಟಮೂರಿಯ ಸರ್ಕಾರಿ ಶಾಲೆಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಮತ ಚಲಾಯಿಸಿದರು.