

ಬಾಗಲಕೋಟೆ: ಅಂಗನವಾಡಿಗೆ ತೆರಳುತ್ತಿದ್ದ ನಾಲ್ಕು ವರ್ಷದ ಬಾಲಕನನ್ನು ಆತನ ಚಿಕ್ಕಪ್ಪ ವ್ಯಕ್ತಿ ತನ್ನ ಮನೆಗೆ ಕರೆದುಕೊಂಡು ಹೋಗಿ ಚಾಕುವಿನಿಂದ ಬಾಲಕನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹುನಗುಂದ ತಾಲೂಕಿನ ಬೆನಕನವಾರಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಭೀಮಪ್ಪ ವಾಲಿಕಾರ ಎನ್ನುವ ದುಷ್ಟನೇ ಚಾಕುವಿನಿಂದ ಬಾಲಕನ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ. ಕೊಲೆ ಆರೋಪಿ ಬಾಲಕನಿಗೆ ವರಸೆಯಲ್ಲಿ ಚಿಕ್ಕಪ್ಪನಾಗಬೇಕು. ಬುಧವಾರ ಬೆಳಗ್ಗೆ ಬಾಲಕ ಅಂಗಡಿಯಲ್ಲಿ ಚಾಕಲೇಟ್ ತೆಗೆದುಕೊಂಡು ಅಂಗನವಾಡಿಗೆ ಹೊರಟಿದ್ದು. ಈ ವೇಳೆ ಎದುರಿಗೆ ಬಂದ ಭೀಮಪ್ಪ ವಾಲಿಕಾರ, ಬಾಲಕನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಮನೆಯಲ್ಲಿ ಬಾಲಕನನ್ನು ಮಲಗಿಸಿ ಕುತ್ತಿಗೆಗೆ ಚಾಕುವಿಂದ ಕೊಯ್ದು ಕೊಲೆ ಮಾಡಿದ್ದಾನೆ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಾಲಕನ ತಾಯಿ ಹನಮವ್ವ ತಮಗೂ ಹಾಗೂ ಭೀಮಪ್ಪನ ಕುಟುಂಬಕ್ಕೂ ಯಾವುದೇ ದ್ವೇಷ ಇರಲಿಲ್ಲ. ನನ್ನ ತಂಗಿಯನ್ನು ಮದುವೆಯಾಗಿದ್ದಾನೆ. ಗಂಡ ಹೆಂಡತಿ ಜಗಳ ಇತ್ತು, ಅದಕ್ಕೆ ನನ್ನ ಮಗನನ್ನು ಬಲಿ ತೆಗೆದುಕೊಂಡಿದ್ದಾನೆ ಎಂದು ಆರೋಪಿಸುತ್ತಾರೆ. ಅಲ್ಲದೇ ಕೊಲೆ ಆರೋಪಿ ಭೀಮಪ್ಪನ ಮಾನಸಿಕ ಸ್ಥಿತಿ ಸರಿ ಇರಲಿಲ್ಲ ಎಂದು ಸಹ ಹೇಳಲಾಗುತ್ತಿದೆ. ಆದರೆ, ನಾಲ್ಕು ವರ್ಷದ ಬಾಲಕನನ್ನು ಹೀಗೆ ಭೀಕರವಾಗಿ ಕೊಲೆ ಮಾಡಲು ಕಾರಣ ಏನು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಈ ಬಗ್ಗೆ ವಿಚಾರಣೆ ನಡೆದಿದೆ. ತನಿಖೆ ಬಳಿಕ ಸತ್ಯ ಗೊತ್ತಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಸಿದ್ಧಾರ್ಥ ಗೋಯಲ್ ತಿಳಿಸಿದ್ದಾರೆ. ಈ ಕುರಿತು ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಭೀಮಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.