ಬೆಟ್ಟದಪುರ ನಾಡಕಚೇರಿಯಲ್ಲಿ ಎರಡು ಕಂಪ್ಯೂಟರ್ ಕಳವು

29BTP02
Published on

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ನಾಡಕಚೇರಿಯಲ್ಲಿ ಕಳ್ಳರು ಕಚೇರಿ ಬೀಗ ಒಡೆದು ಎರಡು ಕಂಪ್ಯೂಟರ್‌ಗಳನ್ನು ಕಳ್ಳತನ ಮಾಡಿದ್ದಾರೆ.

ಸೆ.26ರಂದು ಎಂದಿನಂತೆ ಕಚೇರಿ ಮುಗಿಸಿ ಸಂಜೆ ಸಮಯದಲ್ಲಿ ಬೀಗ ಹಾಕಿ ಸಿಬ್ಬಂದಿ ಮನೆಗೆ ತೆರಳಿದ್ದಾರೆ. ಸೋಮವಾರ ಬೆಳಗ್ಗೆ ಎಂಟು ಗಂಟೆಗೆ ನಾಡಕಚೇರಿ ಸಿಬ್ಬಂದಿ ಸಂತೋಷ್ ಬಂದು ನೋಡಿದಾಗ ಮುಂದಿನ ಬಾಗಿಲು ಬೀಗ ಒಡೆದಿರುವುದು ಗಮನಕ್ಕೆ ಬಂದಿದೆ.

ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಲು ಬಳಕೆ ಮಾಡುತ್ತಿದ್ದ ಎರಡು ಕಂಪ್ಯೂಟರ್‌ಗಳು ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಸುಮಾರು ಅರವತ್ತು ಸಾವಿರ ರೂ.ಮೌಲ್ಯದ ಕಂಪ್ಯೂಟರ್‌ಗಳು ಕಳ್ಳತನವಾಗಿದೆ ಎಂದು ಉಪ ತಹಸೀಲ್ದಾರ್ ಶಶಿಧರ್ ಅವರು ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅಪರಾಧ ವಿಭಾಗದ ಪಿಎಸ್‌ಐ ಸ್ವಾಮಿನಾಯಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net