ಬೆಂಗಳೂರಿನಿಂದ ಔಷಧ ತಂದು ಕೊಟ್ಟ ಶಾಸಕ!

19KMT1
Published on

ಕುಮಟಾ: ಇಲ್ಲಿನ ತಾಲೂಕಾಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ ಅತ್ಯಗತ್ಯವಿದ್ದ ಔಷಧ ಸಾಮಗ್ರಿಗಳ ಮಾಹಿತಿ ಪಡೆದ ಶಾಸಕ ದಿನಕರ ಶೆಟ್ಟಿ ಅವರು ಬೆಂಗಳೂರಿನಿಂದ ತೆಗೆದುಕೊಂಡು ಬಂದು ಅವುಗಳನ್ನು ಶುಕ್ರವಾರ ವೈದ್ಯಾಧಿಕಾರಿ ಡಾ. ಗಣೇಶ ನಾಯ್ಕ ಅವರಿಗೆ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಅವರು, ಕುಮಟಾ ಹಾಗೂ ಹೊನ್ನಾವರ ತಾಲೂಕಾಸ್ಪತ್ರೆಯ ಡಯಾಲಿಸಿಸ್ ಕೇಂದ್ರಗಳಲ್ಲಿ ಅತ್ಯವಶ್ಯಕ ಔಷಧಗಳ ತೀವ್ರ ಕೊರತೆಯಾಗಿರುವ ಬಗ್ಗೆ ವೈದ್ಯಾಧಿಕಾರಿಗಳು ಹಾಗೂ ಕೆಲ ರೋಗಿಗಳು ಮಾಹಿತಿ ನೀಡಿದ್ದರು. ಕಾರ್ಯನಿಮಿತ್ತ ಬೆಂಗಳೂರಿನಲ್ಲಿದ್ದ ನಾನು ಕೂಡಲೇ ಡಾ. ಬಿ.ಆರ್. ಶೆಟ್ಟಿ ಅವರ ಆಪ್ತಕಾರ್ಯದರ್ಶಿ ಕುಶಾಲ ಶೆಟ್ಟಿ ಅವರಿಗೆ ಈ ಬಗ್ಗೆ ವಿವರಿಸಿ ತುರ್ತಾಗಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ವಿನಂತಿಸಿದೆ. ಕೋರಿಕೆಗೆ ಸ್ಪಂದಿಸಿದ ಅವರು ಅಂದಾಜು 10 ರಿಂದ 12 ದಿನಗಳವರೆಗೆ ಸಾಕಾಗುವಷ್ಟು ಔಷಧಗಳನ್ನು ಕೊಟ್ಟರು. ಬೆಂಗಳೂರಿನಿಂದ ಕೂಡಲೇ ಔಷಧದೊಂದಿಗೆ ಹೊರಟು ಇಲ್ಲಿನ ಡಯಾಲಿಸಿಸ್ ಕೇಂದ್ರಕ್ಕೆ ನೀಡಿದ್ದೇನೆ. ಹಾಗೆಯೇ ಈ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಅವರೊಂದಿಗೂ ಮಾತನಾಡಿದ್ದೇನೆ. ಡಯಾಲಿಸಿಸ್ ಕೇಂದ್ರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಔಷಧಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಡಾ. ಗಣೇಶ ನಾಯ್ಕ ಮಾತನಾಡಿ, ಇಲ್ಲಿನ ಡಯಾಲಿಸಿಸ್ ಕೇಂದ್ರಕ್ಕೆ ಶಾಸಕರು ಔಷಧ ತಂದುಕೊಡುವಲ್ಲಿ ಇನ್ನೊಂದು ದಿನ ವಿಳಂಬವಾದರೂ ಡಯಾಲಿಸಿಸ್ ಮಾಡುವುದು ಕಷ್ಟವಾಗುತ್ತಿತ್ತು. ಶಾಸಕರ ಸಮಯಪ್ರಜ್ಞೆಯಿಂದ ದೊಡ್ಡ ಸಮಸ್ಯೆ ತತ್ಕಾಲದಲ್ಲಿ ನೀಗಿದಂತಾಗಿದೆ. ಕೆಲ ತಿಂಗಳ ಹಿಂದೆಯೂ ಒಮ್ಮೆ ಇದೇ ರೀತಿ ಸಮಸ್ಯೆಯಾದಾಗ ಶಾಸಕರು ಮೈಸೂರಿನಿಂದ ಔಷಧ ತರಿಸಿ ಡಯಾಲಿಸಿಸ್ ಮಾಡಲು ಅನುಕೂಲ ಮಾಡಿಕೊಟ್ಟಿದ್ದರು ಎಂದರು. ಡಾ. ಶ್ರೀನಿವಾಸ ನಾಯಕ, ಪುರಸಭೆ ಸದಸ್ಯ ಮಹೇಶ ನಾಯ್ಕ, ವಿನಾಯಕ ಭಟ್, ರಾಜು ಪಟಗಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net