ಬೆಂಗಳೂರಿನ ಆಸ್ತಿ ಮಾರಿ ಯುಕೆಪಿ ಪೂರ್ಣಗೊಳಿಸಿ

bkt-3-1 a
Published on

ಬಾಗಲಕೋಟೆ: ಪಂಚ ಗ್ಯಾರಂಟಿಯಿಂದ ಸರ್ಕಾರದಲ್ಲಿ ದುಡ್ಡು ಇಲ್ಲ ಎಂದು ನೀವೇ(ಕೃಷ್ಣಾ ಯೋಜನೆ ಸಂತ್ರಸ್ತರು) ಹೇಳೋದಲ್ಲ. ಸರ್ಕಾರ ದುಡ್ಡು ಕೊಡಬೇಕು ಎಂದರೆ ಸಾಕಷ್ಟು ದಾರಿಗಳಿವೆ. ಬೆಂಗಳೂರಲ್ಲಿ ಬೆಲೆ ಬಾಳುವ ಸರ್ಕಾರಿ ಆಸ್ತಿಗಳಿವೆ. ಒಂದು ಆಸ್ತಿ ತೆಗೆದು ಉತ್ತರ ಕರ್ನಾಟಕಕ್ಕೆ ೧ ಲಕ್ಷ ಕೋಟಿ ರೂ. ಕೊಡಿ ಎಂದು ತಮ್ಮದೇ ಪಕ್ಷದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಎಸ್.ಆರ್.ಪಾಟೀಲ ಗುಡುಗಿದ್ದಾರೆ.

ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಇಂದಿನಿಂದ ಆರಂಭವಾದ ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಹಮ್ಮಿಕೊಂಡಿರುವ ಸರದಿ ಧರಣಿ ಸತ್ಯಾಗ್ರಹದ ಬಹಿರಂಗ ಸಭೆಯಲ್ಲಿ ಸಿದ್ದರಾಮಯ್ಯ ಅವರು, ಚುನಾವಣೆಗೂ ಮುನ್ನ ನೀರಾರಿ ಕ್ಷೇತ್ರಕ್ಕೆ ನೀಡಿದ್ದ ಭರವಸೆಯಂತೆ ನಡೆದುಕೊಂಡಿಲ್ಲ ಎಂದು ಬೇಸರ ಹೊರಹಾಕಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-೩ ಪೂರ್ಣಗೊಳಿಸಲು ಇವತ್ತಿನ ಅಂದಾಜಿನ ಪ್ರಕಾರ ಒಂದು ಲಕ್ಷ ಕೋಟಿ ರೂ. ಬೇಕಾಗುತ್ತದೆ. ಇದಕ್ಕೆ ಹಣ ಹೊಂದಿಸುವುದು ದೊಡ್ಡ ವಿಚಾರವೇ ಅಲ್ಲ. ಬೆಂಗಳೂರನಲ್ಲಿ ಲಕ್ಷ ಲಕ್ಷ ಕೋಟಿ ರೂ. ಬೆಲೆ ಬಾಳುವ ಸಾಕಷ್ಟು ಸರ್ಕಾರದ ಆಸ್ತಿಗಳು ಇವೆ. ಟರ್ಪ್ ಕ್ಲಬ್, ರೇಸ್ ಕೋರ್ಸ್, ಗಾಲ್ ಇದೆ. ರೇಸ್ ಕೋರ್ಸ್ ಒಂದೇ ಮಾರಿದರೆ ೫ ಲಕ್ಷ ಕೋಟಿ ರೂ. ಬರುತ್ತದೆ. ಗಾಲ್ ಮಾರಾಟ ಮಾಡಿದರೆ ೫೦ ಲಕ್ಷ ಕೋಟಿ ರೂ. ಸಿಗುತ್ತದೆ. ಒಂದು ಆಸ್ತಿ ತೆಗೆಯಿರಿ? ದಡ್ಡು ಇಲ್ಲ ಎನ್ನುವ ಬದಲಿಗೆ ಒಂದು ಸಣ್ಣ ಆಸ್ತಿ ಮಾರಾಟ ಮಾಡಿದರೆ ಕೃಷ್ಣಾ ಯೋಜನೆಗೆ ಬೇಕಾದ ಹತ್ತು ಪಟ್ಟು ಹಣ ಬರುತ್ತದೆ. ಅದರಲ್ಲಿ ಉತ್ತರ ಕರ್ನಾಟಕಕ್ಕೆ ಒಂದು ಲಕ್ಷ ಕೋಟಿ ರೂ. ಕೊಡಿ ಎಂದು ಇನ್ನು ಮುಂದೆ ನೀವೆಲ್ಲ ಕೇಳಬೇಕು ಎಂದು ಮುಳುಗಡೆ ಸಂತ್ರಸ್ತರಿಗೆ ಸಲಹೆ ನೀಡಿದರು.

ಚುನಾವಣೆ ಪೂರ್ವದಲ್ಲಿ ವಿಜಯಪುರದಲ್ಲಿ ಸಿದ್ದರಾಮಯ್ಯ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ ವಾರ್ಷಿಕ ೪೦ ಸಾವಿರ ಕೋಟಿ ರೂ.ಗಳಂತೆ ಐದು ವರ್ಷದಲ್ಲಿ ೨ ಲಕ್ಷ ಕೋಟಿ ರೂ. ಕೊಡುತ್ತೇವೆ ಎಂದು ವೇದಿಕೆಯಲ್ಲಿ ಇದ್ದ ನನಗೆ ಎಸ್.ಆರ್.ಪಾಟೀಲರೇ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿಯೇ ೭೫ ಸಾವಿರ ಕೋಟಿ ರೂ. ಕೊಡುತ್ತೇವೆ ಎಂದು ಘೋಷಿಸಿದ್ದರು. ಅಧಿಕಾರ ಬಂದ ಮೇಲೆ ಸಿದ್ದರಾಮಯ್ಯ ಸಿಎಂ ಆಗಿ ಎರಡು ಬಜೆಟ್ ಕೊಟ್ಟಿದ್ದಾರೆ. ನಾನು ಹಿಂದೆ ಪ್ಲಾನಿಂಗ್ ಮಿನಿಸ್ಟರ್ ಆಗಿದ್ದರಿಂದ ಬಜೆಟ್ ಅತ್ಯಂತ ಕುತೂಹಲದಿಂದ ನೋಡುತ್ತೇನೆ. ಆದರೆ, ಸಿದ್ದರಾಮಯ್ಯ ಅವರು ೨ ಬಜೆಟ್‌ನಲ್ಲಿ ತಲಾ ೪೦ ಸಾವಿರ ಕೋಟಿ ರೂ. ಇಟ್ಟೆ ಇಲ್ಲ ಎಂದು ಅಸಮಧಾನ ಹೊರಹಾಕಿದರು.

ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಈ ತಾತ್ಸಾರವೇಕೆ? ಕೃಷ್ಣಾ ಯೋಜನೆಗೆ ಅನುದಾನ ನೀಡದೇ ಯೋಜನೆ ಮುಗಿಯದಿದ್ದರೆ ಉತ್ತರ ಕರ್ನಾಟಕ ಭಿಕ್ಷುಕರ ನಾಡಾದೀತು ಎಂದು ಎಚ್ಚರಿಸಿದ ಎಸ್.ಆರ್.ಪಾಟೀಲ, ರಾಜ್ಯ ಸರ್ಕಾರ ಏನು ಮಾಡುತ್ತದೋ ಬಿಡುತ್ತದೋ ಗೊತ್ತಿಲ್ಲ. ಇದನ್ನು ರಾಷ್ಟ್ರೀಯ ಯೋಜನೆ ಮಾಡುತ್ತೀರೋ ಅಥವಾ ಅಂತಾರಾಷ್ಟ್ರೀಯ ಯೋಜನೆ ಎಂದು ಮಾಡಿತ್ತಿರೋ ಒಟ್ಟಾರೆ, ಬೆಗ್ ನಮ್ಮ ಯೋಜನೆ ಪೂರ್ಣಗೊಳಿಸಿ ಎಂದು ಸರ್ಕಾರಕ್ಕೆ ಕಿವಿಹಿಂಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net