ಬೆಂಗಳೂರಿಂದ ಬರುತ್ತಿದೆ ಸೋಂಕು

9sdp2
Published on

ಕಾರವಾರ: ಜಿಲ್ಲೆಯಲ್ಲಿ ಗುರುವಾರ 23 ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯ ಒಟ್ಟಾರೆ ಕೋವಿಡ್ ರೋಗಿಗಳ ಸಂಖ್ಯೆ 500 ರ ಗಡಿ ದಾಟಿದೆ.

ಕಾರವಾರದಲ್ಲಿ 10, ಸಿದ್ದಾಪುರದಲ್ಲಿ 5, ಹೊನ್ನಾವರ ಯಲ್ಲಾಪುರದಲ್ಲಿ ತಲಾ2, ಶಿರಸಿ, ಭಟ್ಕಳ, ಮುಂಡಗೋಡ ಹಾಗೂ ಹಳಿಯಾಳ ತಾಲೂಕಿನಲ್ಲಿ ತಲಾ ಒಬ್ಬರಿಗೆ ಗುರುವಾರ ಸೋಂಕು ಖಚಿತವಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 512 ಕ್ಕೆ ತಲುಪಿದ್ದು, 210 ಜನರು ಗುಣ ಹೊಂದಿದ್ದಾರೆ. 300 ಸಕ್ರಿಯ ಪ್ರಕರಣಗಳಿವೆ.

ಆಗ ದುಬೈ, ಮುಂಬೈನಿಂದ ಬಂದವರಲ್ಲಿ ಸೋಂಕು ಕಂಡುಬರುತ್ತಿತ್ತು. ಈಗ ರಾಜ್ಯದ ಬೆಂಗಳೂರಿನಿಂದ ಬಂದವರಲ್ಲಿ ರೋಗ ಕಾಣಿಸಿಕೊಳ್ಳುತ್ತಿದೆ. ಹಿಂದೆ ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆ ಇದ್ದುದರಿಂದ ಹೆಚ್ಚಿನ ಜನರಿಗೆ ಹರಡುತ್ತಿರಲಿಲ್ಲ. ಈಗ ಬೆಂಗಳೂರಿನಿಂದ ಬಂದವರಿಗೆ ಕ್ವಾರಂಟೈನ್ ವ್ಯವಸ್ಥೆ ಇಲ್ಲದ ಕಾರಣ ಹೆಚ್ಚಿನ ಜನರಿಗೆ ಹರಡುವ ಭೀತಿ ಎದುರಾಗಿದೆ.

ಗುರುವಾರ ಬೆಂಗಳೂರಿನಿಂದ ಆಗಮಿಸಿದ 6 ಜನರಲ್ಲಿ ಸೋಂಕು ದೃಢಪಟ್ಟಿದೆ. ಅದರಲ್ಲಿ ಕೆಎಸ್​ಆರ್​ಟಿಸಿ ಡ್ರೖೆವರ್ ಕೂಡ ಇದ್ದು ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರಿನಿಂದ ಆಗಮಿಸಿದ್ದ ಸಿದ್ದಾಪುರದ ಗುಂಜಗೋಡಿನ 23 ವರ್ಷದ ವ್ಯಕ್ತಿ, ಹೊಸೂರು ಹಾಗೂ ಲಂಬಾಪುರದ ಇಬ್ಬರು ಮಹಿಳೆಯರು, ಕಾರವಾರ ಚೆಂಡಿಯಾಕ್ಕೆ ವಾಪಸಾದ 21 ವರ್ಷದ ಯುವಕ, ಬಿಣಗಾಕ್ಕೆ ವಾಪಸಾದ 24 ವರ್ಷದ ಯುವಕ, ಮುಂಡಗೋಡ ನಾಗನೂರಿಗೆ ಬಂದ 20 ವರ್ಷದ ಯುವಕನಲ್ಲಿ ಸೋಂಕು ದೃಢಪಟ್ಟಿದೆ.

ಇರಾಕ್ ನಂಟು: ಕಾರವಾರಕ್ಕೆ ಇರಾಕ್​ನಿಂದ ಬಂದು ಕೋಡಿಬಾಗದ ಹೋಟೆಲ್ ಒಂದರಲ್ಲಿ ಕ್ವಾರಂಟೈನ್​ನಲ್ಲಿದ್ದ ಮೂವರು ಯುವಕರಲ್ಲಿ ಸೋಂಕು ಖಚಿತವಾಗಿದೆ. ಅಂಡಮಾನ್, ನಿಕೋಬಾರ್​ನಿಂದ ವಾಪಸಾದ ಕಾಜುಬಾಗದ 43 ವರ್ಷದ ವ್ಯಕ್ತಿಯಲ್ಲಿ, ಭಟ್ಕಳಕ್ಕೆ ವಿಜಯವಾಡದಿಂದ ಬಂದ 44 ವರ್ಷದ ವ್ಯಕ್ತಿ, ಹಳಿಯಾಳ ಲಕ್ಷ್ಮೀಗಲ್ಲಿಗೆ ಗೋವಾದಿಂದ ಬಂದ 60 ವರ್ಷದ ವೃದ್ಧನಲ್ಲಿ ಸೋಂಕು ಕಂಡುಬಂದಿದೆ.

ವೈದ್ಯರು ಆರೋಗ್ಯ ಸಿಬ್ಬಂದಿಗೂ ಆತಂಕ: ಸಿದ್ದಾಪುರ ಸರ್ಕಾರಿ ಆಸ್ಪತ್ರೆಯ 56 ಹಾಗೂ 59 ವರ್ಷದ ಇಬ್ಬರು ವೈದ್ಯರಿಗೆ ಕರೊನಾ ದೃಢಪಟ್ಟಿದೆ. ಒಬ್ಬರು ಶಿರಸಿಯಿಂದ, ಇನ್ನೊಬ್ಬರು ಶಿರಾಳಕೊಪ್ಪದಿಂದ ಓಡಾಡುತ್ತಿದ್ದರು. ಕಾರವಾರದ ಕ್ರಿಮ್ಸ್​ನ 25 ವರ್ಷದ ಆರೋಗ್ಯ ಸಿಬ್ಬಂದಿಗೆ, 24 ವರ್ಷದ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುದಗಾ ಕಾಲನಿಯ ತಂತ್ರಜ್ಞನಲ್ಲೂ ಕರೊನಾ ಇರುವುದು ದೃಢವಾಗಿದೆ.

ಹೊನ್ನಾವರದಲ್ಲಿ ಹಿಂದೆ ಸೋಂಕಿತರಾಗಿದ್ದ 21532 ಸಂಪರ್ಕಕ್ಕೆ ಬಂದ 45 ವರ್ಷದ ಮಹಿಳೆ ಹಾಗೂ 25 ವರ್ಷದ ಪುರುಷನಲ್ಲಿ, ಶಿರಸಿಯಲ್ಲಿ ಪಿ-20704 ಸಂಪರ್ಕಕ್ಕೆ ಬಂದ 43 ವರ್ಷದ ಮಹಿಳೆಯಲ್ಲಿ ಸೋಂಕು ಖಚಿತವಾಗಿದೆ. ದಾಂಡೇಲಿಯ ಪಟೇಲ್ ನಗರದ ಇನ್ನೊಬ್ಬರಲ್ಲಿ ಸೋಂಕು ಕಂಡುಬಂದಿದ್ದು, ಅವರನ್ನು ಧಾರವಾಡಕ್ಕೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ಇದೆ. ಪಟೇಲ್ ನಗರ ಸೀಲ್​ಡೌನ್ ಮಾಡಲಾಗಿದೆ.

ಪತ್ತೆಯಿಲ್ಲ: ಯಲ್ಲಾಪುರದ ರವೀಂದ್ರ ನಗರ ಹಾಗೂ ಕಾಳಮ್ಮ ನಗರದ ಇಬ್ಬರು ಯುವತಿಯರು, ಕಾರವಾರ ಮುದಗಾ ಕಾಲನಿಯ 30 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಅವರಿಗೆ ಯಾರಿಂದ ರೋಗ ಹರಡಿತು ಎಂಬುದನ್ನು ಇನ್ನಷ್ಟೇ ಹುಡುಕಬೇಕಿದೆ.

ಸ್ವಯಂ ಲಾಕ್​ಡೌನ್​ಗೆ ನಿರ್ಧಾರ: ಕಾರವಾರದಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಜು.10 ರಿಂದ ಮುಂದಿನ 10 ದಿನಗಳವರೆಗೆ ಬೆಳಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಅಂಗಡಿಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಈ ಕುರಿತು ಕಾರವಾರ ಚೇಂಬರ್ ಆಫ್ ಕಾಮರ್ಸ್​ನಿಂದ ಉಪವಿಭಾಗಾಧಿಕಾರಿಗೆ ಪತ್ರ ಮುಖೇನ ಮಾಹಿತಿ ನೀಡಲಾಗಿದೆ. ಈ ಲಾಕ್​ಡೌನ್​ನಿಂದ ಔಷಧ ಅಂಗಡಿಗಳು ಹಾಗೂ ರೆಸ್ಟೊರೆಂಟ್​ಗಳನ್ನು ಹೊರಗಿಡಲಾಗಿದೆ.

ನೆಗೆಟಿವ್ ವರದಿ : ಭಟ್ಕಳ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಯೊಬ್ಬರಿಗೆ ಕರೊನಾ ಇರುವುದಾಗಿ ವರದಿ ಬಂದಿತ್ತು. ಎರಡನೇ ಬಾರಿ ಪರಿಶೀಲನೆ ವೇಳೆ ನೆಗೆಟಿವ್ ವರದಿ ಬಂದಿದೆ. ಕೋವಿಡ್-19 ಕರ್ತವ್ಯದಲ್ಲಿ ನಿರತ ಎಲ್ಲ ಆರೋಗ್ಯ ಸಿಬ್ಬಂದಿಗೂ ಗಂಟಲ ದ್ರವ ಪರೀಕ್ಷೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net