

ಪವನ್ ಆಚಾರ್ಯ ನೀರ್ಚಾಲು ಬೆಂಗಳೂರು
ಸಾಮಾನ್ಯವಾಗಿ ಬೇಸಿಗೆಯ ಅಂತ್ಯ, ಚಳಿಗಾಲ ಆರಂಭದ ಹೊತ್ತಿನಲ್ಲಿ ಕೈಗೆಟುವಂತಿರುತ್ತಿದ್ದ ಎಳನೀರು ದರ ಈ ಬಾರಿ ಗ್ರಾಹಕರ ಜೇಬು ಸುಡುತ್ತಿದೆ. ನಗರದಲ್ಲಿ ದರ ಏರಿಕೆ ಇಮ್ಮಡಿಯಾಗಿದ್ದು, ಸಾಧಾರಣ ಗುಣಮಟ್ಟದ ಒಂದು ಎಳನೀರಿಗೆ 60ರಿಂದ 70 ರೂ. ತೆರಬೇಕಾಗಿದೆ.
ಎಳನೀರು ದರ ದಿಢೀರನೇ ಏರಿಕೆಯಾಗಿದ್ದು, ನಗರಗಳಲ್ಲಿ ಕಡಿಮೆ ಎಂದರೂ 50ರಿಂದ 70 ರೂ.ಗೆ ಮಾರಾಟವಾಗುತ್ತಿದೆ. ನಗರದ ಹೊರ ವಲಯದಲ್ಲೂ ಕನಿಷ್ಠ 40 ರೂ.ಗಿಂತ ಕಡಿಮೆ ದರದಲ್ಲೂ ಸಿಗದಂತಾಗಿದೆ. ಹವಾಮಾನ ವೈಪರೀತ್ಯ, ರೋಗಭಾದೆ ಸೇರಿ ಹಲವು ಕಾರಣಗಳಿಂದ ಈ ವರ್ಷ ಎಳನೀರು ಇಳುವರಿ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಸಿಗುವ ಹೆಚ್ಚಿನ ಎಳನೀರು ಮದ್ದೂರು, ಮಳವಳ್ಳಿ, ಮಂಡ್ಯ, ರಾಮನಗರ, ಹಾಸನ ಮತ್ತು ಕೊಳ್ಳೇಗಾಲದಿಂದ ಬರುತ್ತವೆ. ಎಲ್ಲ ಕಡೆ ಇಳವರಿ ಕಡಿಮೆ ಇರುವುದರಿಂದ ಸದ್ಯ ಚಾಮರಾಜನಗರ ಇತ್ಯಾದಿ ಪ್ರದೇಶಗಳಿಂದ ಹೆಚ್ಚಾಗಿ ನಗರವನ್ನು ಪ್ರವೇಶಿಸುತ್ತಿದೆ. ವ್ಯಾಪಾರಿಗಳಿಗೆ ಸುಮಾರು 50 ರೂ.ಗೆ ಸಿಗುತ್ತಿರುವುದರಿಂದ ಸ್ವಾಭಾವಿಕವಾಗಿ ದರ ಏರಿಕೆಯಾಗಿದೆ.
ಆರೋಗ್ಯ ಸಮಸ್ಯೆಯಿಂದ ಬಳಲುವವರಿಗೆ, ಅನಿವಾರ್ಯವಾಗಿ ಎಳನೀರು ಕುಡಿಯಬೇಕು ಎಂದಿದ್ದವರಿಗೆ ದರ ಏರಿಕೆ ಹೊರೆಯಾಗಿದೆ. ಹಲವರು ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದಲೇ ಎಳನೀರು ಕುಡಿಯುತ್ತಾರೆ. ಅಂಥವರು ದರದ ಕಾರಣದಿಂದಾಗಿ ಹಿಂಜರಿಯುವಂತಾಗಿದೆ. ಆದ್ದರಿಂದ ಆರೋಗ್ಯದ ದೃಷ್ಟಿಯಿಂದ ಎಳನೀರು ದರ ಕಡಿಮೆಯಾಗಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ.
ಮುಂಬೈ ಇತ್ಯಾದಿ ನಗರಗಳಿಗೆ ಎಳನೀರಿನ ಒಳ್ಳೆಯ ತಳಿಗಳು ರ್ತಾಗುತ್ತಿರುವುದರಿಂದ ಬೆಂಗಳೂರಿಗೆ ಪೂರೈಕೆ ಕಡಿಮೆಯಾಗಿದೆ. ಬರುವಂತಹವು ಕೂಡ ಹೆಚ್ಚಾಗಿ ಮಾರಾಟವಾಗುವುದಿಲ್ಲ. ಗುಣಮಟ್ಟದ ಎಳನೀರು ಲಭಿಸದೆ ಇರುವುದರಿಂದ, ಪೂರೈಕೆ ಕಡಿಮೆಯಾದ್ದರಿಂದ ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಗ್ರಾಹಕರಿಂದ ಬೇಡಿಕೆ ಇದೆ. ಹೀಗೇ ದರ ಏರಿಕೆಯಾಗುತ್ತಿದ್ದರೆ, ಅದೂ ನಿಲ್ಲಬಹುದು. > ಪ್ರಸನ್ನ, ಎಳನೀರು ವ್ಯಾಪಾರಿ, ಹನುಮಂತನಗರ ಈ ಬಾರಿ ಬೆಳೆ ಸರಿಯಾಗಿ ಬಂದಿಲ್ಲ. ಮಳೆ ಅಭಾವದಿಂದ ಇಳುವರಿ ಕುಸಿತ ಕಂಡಿದೆ. ಗುಣಮಟ್ಟದ ಎಳನೀರು ನಗರದಲ್ಲಿ 70 ರೂ. ಬೆಲೆ ಬಾಳುತ್ತದೆ. ಮಧ್ಯಮ ಗುಣಮಟ್ಟದ ಮಾಲು 50&60 ರೂ.ಗೆ, ಕಡಿಮೆ ಗುಣಮಟ್ಟದ ಎಳನೀರು ಕನಿಷ್ಠ 40ರೂ.ಗೆ ಮಾರಾಟವಾಗುತ್ತಿದೆ. ಮುಂದಿನ ಬಾರಿ ಮಳೆ ಸರಿಯಾಗಿ ಬಂದರೆ, ಎಳನೀರು ವ್ಯಾಪಾರ ಚೆನ್ನಾಗಿ ನಡೆಯಲಿದೆ. > ಲಕ್ಷ್ಮಣ್, ಎಳನೀರು ವ್ಯಾಪಾರಿ, ವಿದ್ಯಾಪಿಠ ವೃತ್ತ ಹವಾಮಾನ ವೈಪರೀತ್ಯ, ರೋಗಭಾದೆ ಇತ್ಯಾದಿ ಕಾರಣಗಳಿಂದ ಎಳನೀರು ಇಳುವರಿ ಕಡಿಮೆಯಾಗಿರುವುದು ಪೂರೈಕೆಯಲ್ಲಿ ದೊಡ್ಡ ವ್ಯತ್ಯಾಸ ತಂದಿದೆ. ಬೇಕಾದಷ್ಟು ಮಾಲು ಮಾರುಕಟ್ಟೆಗೆ ಬಾರದೆ ಇರುವುದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ. ನಾವು ಈಗಾಗಲೇ 60 ರೂ.ಗೆ ಎಳನೀರನ್ನು ಮಾರಾಟ ಮಾಡುತ್ತಿದ್ದೇವೆ. > ಶಿವಸ್ವಾಮಿ, ಎಳನೀರು ವ್ಯಾಪಾರಿ, ಚಾಮರಾಜಪೇಟೆ ಎಳನೀರು ಬೆಲೆ ಏರಿಕೆಯಿಂದ ಬೇಸತ್ತ ಗ್ರಾಹಕರು ಪರ್ಯಾಯ ಮಾರ್ಗಗಳನ್ನು ನೋಡುವುದು ಸಾಮಾನ್ಯ. ಹೀಗಾಗಿ ತಾಟಿನಿಂಗು ವ್ಯಾಪಾರ ಭರದಿಂದ ಸಾಗುತ್ತಿದೆ. 100 ರೂ.ಗೆ 4 ತಾಟಿನಿಂಗು ಹಣ್ಣುಗಳು ಬರುತ್ತವೆ. ಹೆಚ್ಚು ದುಡ್ಡು ಕೊಟ್ಟು ಕಡಿಮೆ ಗುಣಮಟ್ಟದ ಎಳನೀರು ಖರೀದಿಸುವುದರಿಂದ ಪರ್ಯಾಯ ವಸ್ತುಗಳನ್ನು ಕೊಂಡುಕೊಳ್ಳುವುದು ಲೇಸು ಎಂದು ನಮ್ಮಲ್ಲಿಗೆ ಬರುವ ಗ್ರಾಹಕರು ತಿಳಿಸಿದ್ದಾರೆ. > ಮಧು, ತಾಟಿ ನಿಂಗು ವ್ಯಾಪಾರಿ, ಆರ್.ಸಿ. ಪುರ ಕೆಲವು ವಾರಗಳ ಹಿಂದೆಯಷ್ಟೇ 45 ರೂ. ಇದ್ದ ಎಳನೀರು ದರ ದಿಢೀರನೆ ಇಮ್ಮಡಿಯಾಗಿದೆ. ಇಳುವರಿ ಕುಸಿತ, ಪೂರೈಕೆ ಸಮಸ್ಯೆ ಎದುರಾಗುತ್ತಿದ್ದಂತೆ ಹಲವು ವ್ಯಾಪಾರಿಗಳು, ವ್ಯಾಪಾರದಿಂದ ವಿಮುಖರಾಗುತ್ತಿದ್ದಾರೆ. ಈ ಬಾರಿ ಎಳನೀರು ವ್ಯಾಪಾರ ನಷ್ಟದ ವ್ಯವಹಾರವಾಗಲಿದೆ. > ಸೋಮಣ್ಣ, ಎಳನೀರು ವ್ಯಾಪಾರಿ, ಗವೀಪುರ 20 ರೂ. ಕೊಟ್ಟು ಎಳನೀರು ಕುಡಿಯುವುದಕ್ಕಿಂತ 30 ರೂ.ಗೆ ತಾಜಾ ಹಣ್ಣಿನ ಜ್ಯೂಸ್ ಅಥವಾ ಮಜ್ಜಿಗೆ ಕುಡಿಯಬಹುದು. ಇದೇ ರೀತಿ ದುಪ್ಪಟ್ಟು ಬೆಲೆ ಏರಿಕೆ ಮಾಡಿದರೆ, ಯಾರೂ ಕೊಂಡುಕೊಳ್ಳುವುದಿಲ್ಲ. ದರ ಏರಿಕೆಯಾದಂತೆ ವ್ಯಾಪಾರ ಕಡಿಮೆಯಾಗುತ್ತದೆ. ಈಗ 20 ದಿನಗಳಿಗೊಮ್ಮೆ ಎಳನೀರು ಪೂರೈಕೆಯಾಗುತ್ತಿದೆ. ಅದರಲ್ಲೂ ಉತ್ತಮ ಗುಣಮಟ್ಟದ ಮಾಲು ಸಿಗುವುದು ಕಷ್ಟವಾಗಿದೆ. > ಪ್ರಕಾಶ್, ಗ್ರಾಹಕ, ಗೊಲ್ಲರಹಟ್ಟಿ ದರ ಏರಿಕೆಯಲ್ಲಿ ದಲ್ಲಾಳಿಗಳ ಪಾತ್ರ ಹೆಚ್ಚಿದೆ. ಅತ್ತ ಬೆಳೆದ ರೈತನಿಗೂ ಲಾಭವಿಲ್ಲ, ಇತ್ತ ಮಾರಾಟ ಮಾಡುವರಿಗೂ ಲಾಭ ಇಲ್ಲ. ಮಧ್ಯದಲ್ಲಿ ಹಣ ನುಂಗುವವರು ಇವರು. ಮೊದಲು ರೈತನ ತೋಟದಿಂದ 17 ರೂ.ಗೆ ಎಳನೀರು ಸಿಗುತ್ತಿತ್ತು. ಈಗ ಅದು 40 ರೂ. ಆಗಿದೆ. ಬೆಳೆ ಕಡಿಮೆ ಇರುವುದು, ಬೇಡಿಕೆ ಹೆಚ್ಚಿರುವುದು ದಲ್ಲಾಳಿಗಳಿಗೆ ಪೂರಕವಾಗಿದೆ. > ದರ್ಶನ್, ಗ್ರಾಹಕ, ಪೀಣ್ಯ ಆರೋಗ್ಯ ಸಮಸ್ಯೆ ಇರುವವರಿಗೆ ಎಳನೀರು ಕುಡಿಯದೆ ಇರಲು ಸಾಧ್ಯವಿಲ್ಲ. ಅನಿವಾರ್ಯವಾಗಿ ಸೇವಿಸುವವರಿಗೆ, ಅದರಲ್ಲೂ ಆರ್ಥಿಕವಾಗಿ ಗಟ್ಟಿ ಇಲ್ಲದವರಿಗೆ ಈ ದರ ಏರಿಕೆ ಮುಳುವಾಗಲಿದೆ. ಈ ವರ್ಷವೇ ಎಳನೀರು ಇಷ್ಟೊಂದು ದುಬಾರಿಯಾಗಿರುವುದು. ಎಲ್ಲರ ಹಿತದೃಷ್ಟಿಯಿಂದ ಬೆಲೆ ಕಡಿಮೆ ಮಾಡಿದರೆ ಉತ್ತಮ. > ಜಿ.ಎನ್.ರೆಡ್ಡಿ, ಗ್ರಾಹಕ, ಎನ್.ಆರ್.ಕಾಲನಿ