ಬೃಹತ್ ಜಾಗೃತಿ ಪರಿಸರ ಜಾಥಾ

24 mlv 1
Published on

ಮಳವಳ್ಳಿ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಅಂಗವಾಗಿ ಪರಿಸರ ಸಂರಕ್ಷಣೆ ಅಂಗವಾಗಿ ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಶುಕ್ರವಾರ ಬೃಹತ್ ಜಾಗೃತಿ ಜಾಥಾ ಆಯೋಜಿಸಲಾಗಿತ್ತು.

ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ಜಾಥಾಕ್ಕೆ ತಹಸೀಲ್ದಾರ್ ಡಾ.ವಿ.ಎಸ್.ಲೋಕೇಶ್ ಚಾಲನೆ ನೀಡಿದರು. ವಿವಿಧ ಶಾಲೆಗಳ ನೂರಾರು ಮಂದಿ ವಿದ್ಯಾರ್ಥಿಗಳು, ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಜಾಥಾಲ್ಲಿ ಪರಿಸರ ರಕ್ಷಣೆ ಕುರಿತ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತ ಪಟ್ಟಣದ ಮೈಸೂರು ರಸ್ತೆ, ಕೊಳ್ಳೇಗಾಲ ರಸ್ತೆ ಮೂಲಕ ಸಾಗಿದ ವಿದ್ಯಾರ್ಥಿಗಳು, ಕಾರ್ಯಕರ್ತೆಯರು ಅಂಬೇಡ್ಕರ್ ಭವನ ತಲುಪಿದರು.

ಭವನದಲ್ಲಿ ಪರಿಸರ ಹಾನಿಕಾರಕ ಅಂಶಗಳು, ಅದರ ಪರಿಣಾಮಗಳು ಮತ್ತು ಅದರ ನಿಯಂತ್ರಣ ದಲ್ಲಿ ಸಾರ್ವಜನಿಕರ ಪಾತ್ರ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ ಸಿದ್ಧಪಡಿಸಿರುವ ಕಿರುಚಿತ್ರ ಪ್ರದರ್ಶನ ನಡೆಯಿತು.

ತಹಸೀಲ್ದಾರ್ ಡಾ.ಲೋಕೇಶ್ ಮಾತನಾಡಿ, ಜನರಲ್ಲಿ ಹೆಚ್ಚುತ್ತಿರುವ ಸ್ವಾರ್ಥ ಲಾಲಸೆಯಿಂದ ಪರಿಸರ ಮಾಲಿನ್ಯವಾಗುತ್ತಿದೆ. ಪ್ಲಾಸ್ಟಿಕ್ ಅವ್ಯಾಹತವಾದ ಬಳಕೆಯಿಂದ ಭೂಮಿ ಹಾಗೂ ಜೀವ ಸಂಕುಲಕ್ಕೆ ಮಾರಕವಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸದಿದ್ದರೆ ಮುಂದಿನ ದಿನಮಾನಗಳಲ್ಲಿ ಗಂಡಾಂತರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಾಪಂ ಇಒ ಶ್ರೀನಿವಾಸ್, ತಾಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ, ಪುರಸಭೆ ಮುಖ್ಯಾಧಿಕಾರಿ ನಾಗರತ್ನ, ಸೆಸ್ಕ್ ಎಇಇ ಪ್ರೇಮ್ ಕುಮಾರ್, ಲೋಕೋಪಯೋಗಿ ಇಲಾಖೆಯ ಎಇಇ ಸೋಮಶೇಖರ್, ಸಿಡಿಪಿಒ ನಂಜಮಣಿ, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net