

ಬೇಲೂರು: ಹತ್ತಾರು ಗ್ರಾಮಸ್ಥರು ಆರಾಧ್ಯ ದೈವವಾಗಿ ಪೂಜಿಸುತ್ತಿದ್ದ ಬೂತನಗುಡಿ ಬೂತಪ್ಪ ಎಂದೇ ಹೆಸರಾದ ದೇವರ ಕಲ್ಲಿನ ಮೂರು ಮೂರ್ತಿಯನ್ನು ರಾತ್ರೋ ರಾತ್ರಿ ಖದೀಮರು ಹೊತ್ತೊಯ್ದಿದ್ದಾರೆ.
ತಾಲೂಕಿನ ಚೀಕನಹಳ್ಳಿ ಗ್ರಾಮದ ಸಮೀಪ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು ಭಕ್ತರು ಆತಂಕಗೊಂಡಿದ್ದಾರೆ.
ಚೀಕನಹಳ್ಳಿ ಸಮೀಪದ ರಸ್ತೆ ತಿರುವಿನಲ್ಲಿರುವ ಕಾಫಿತೋಟದಲ್ಲಿ ಹಲವು ವರ್ಷಗಳಿಂದ ಈ ಭಾಗದ ಹತ್ತಾರು ಗ್ರಾಮಗಳ ನೂರಾರು ಭಕ್ತರು ಹಾಗೂ ಇದೇ ರಸ್ತೆಯಲ್ಲಿ ದಿನನಿತ್ಯ ಸಂಚರಿಸುವ ವಾಹನಗಳ ಸವಾರರು, ಚಾಲಕರು ಬೂತಪ್ಪ ದೇವರಿಗೆ ಜಾತಿ, ಧರ್ಮ ಎನ್ನದೆ ಕೈ ಮುಗಿದು ಮುಂದೆ ಸಾಗುತ್ತಿದ್ದರು.
ಇನ್ನೂ ಕೆಲವರು ಬೂತಪ್ಪನಿಗೆ ಹರಕೆಗಳನ್ನು ಹೊತ್ತು ವರ್ಷಕ್ಕೊಮ್ಮೆ ನಡೆಯುವ ಪೂಜೆ ಸಂದರ್ಭದಲ್ಲಿ ಹರಕೆ ತೀರಿಸುತ್ತಿದ್ದರು. ಈ ಭೂತಪ್ಪ ದೇವರಿಗೆ ಈ ಭಾಗದ ಸುತ್ತಮಯತ್ತಲಿನ ಏಳೆಂಟು ಗ್ರಾಮಗಳ ಭಕ್ತರು ಸೇರಿ ವರ್ಷಕ್ಕೊಮ್ಮೆ ವಿಶೇಷ ಜಾತ್ರಾ ಮಹೋತ್ಸವದ ರೀತಿಯಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಆದರೆ ಅದೇನಾಯಿತೊ ಏನೋ ಇದ್ದಕ್ಕಿದ್ದಂತೆ ಕಳೆದ 15 ದಿನಗಳ ಹಿಂದೆ ಮೂರು ಕಲ್ಲಿನ ಮೂರ್ತಿಗಳ ಪೈಕಿ ಒಂದು ಕಲ್ಲಿನ ಮೂರ್ತಿಯನ್ನು ಹೊತ್ತೊಯ್ದಿದ್ದರು. ಈ ವಿಚಾರವಾಗಿ ಈಗಾಗಲೇ ಅರೇಹಳ್ಳಿ ಪೊಲೀಸ್ ಠಾಣೆಗೆ ಸ್ಥಳೀಯರು ದೂರು ನೀಡಿದ್ದರು. ಆದರೆ ಹಿಂದಿನ ಘಟನೆ ನಡೆದು ಇನ್ನೂ ಹದಿನೈದು ದಿನ ಕಳೆದಿರಲಿಲ್ಲ ಆಗಲೇ ಇನ್ನುಳಿದ ಎರಡು ಕಲ್ಲಿನ ಮೂರ್ತಿಗಳನ್ನು ಬಿಡದೆ ಶನಿವಾರ ಹೊತ್ತೊಯ್ದಿದ್ದು ಸ್ಥಳೀಯರು ಆತಂಕದ ಜತೆಗೆ ಭಯ ಭೀತರಾಗಿದ್ದಾರೆ. ಪೊಲೀಸರು ಶೀಘ್ರವೇ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಅರೇಹಳ್ಳಿ ಪಿಎಸ್‌ಐ ಶೋಭಾ ಬೀರಾದಾರ್ ಮತ್ತು ಸಿಬ್ಬಂದಿ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದು, ದೇವರ ಮೂರ್ತಿಗಳ ಕಳವಿಗೆ ಕಾರಣರಾದವರನ್ನು ಶೀಘ್ರವೇ ಬಂಧಿಸುವುದಾಗಿ ತಿಳಿಸಿದ್ದಾರೆ.
ಸಮಾಜ ಸೇವಕ ಹಾಗೂ ದೇವರ ಭಕ್ತ ಸತ್ಯನಾರಾಯಣ್ ಮಾಡಗೋಡು ಮಾತನಾಡಿ, ಈ ಭಾಗದಲ್ಲಿ ಚೀಕನಹಳ್ಳಿ ಭೂತಪ್ಪ ಎಂದರೆ ಸುತ್ತಮುತ್ತಲ ಗ್ರಾಮದವರು ಪರಮ ಭಕ್ತರಾಗಿದ್ದಾರೆ. ಇಲ್ಲಿನ ಗರ್ಭಗುಡಿಗೆ ಪುರಾತನ ಇತಿಹಾಸವಿದ್ದು, ಛಾವಣಿ, ಗುಡಿ ಗೋಪುರ ಇಲ್ಲದ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ದೇವಾಲಯ ಇದಾಗಿದೆ. ಕಳೆದ ತಿಂಗಳು ಒಂದು ಮೂರ್ತಿಯನ್ನು ಕಳವು ಮಾಡಿದ್ದರು. ಈಗ ಎರಡು ಮೂರ್ತಿಗಳನ್ನು ಅಂಜನ ಹಾಕಿ ವಿಗ್ರಹ ಕಿತ್ತುಕೊಂಡು ಹೋಗಿದ್ದಾರೆ. ಮೂರ್ತಿಗಳನ್ನು ಯಾರು ಕದ್ದಿದ್ದಾರೆ ಅವರ ಮೇಲೆ ಕಠಿಣ ಕ್ರಮ ಕೈಗೊಂಡು ಬಂಧಿಸುವಂತೆ ಆಗ್ರಹಿಸಿದರು.
ಜಿಪಂ ಮಾಜಿ ಸದಸ್ಯ ವೈ.ಎನ್.ಕೃಷ್ಣೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಹರೀಶ್, ಸತೀಶ್, ರಂಜೀತ್ ಇತರರಿದ್ದರು.