

ಸಕಲೇಶಪುರ: ತಾಲೂಕಿನ ವಳಲಹಳ್ಳಿ ಗ್ರಾಮದ ಸುಗ್ಗಿ ನಡೆಯುವ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಬುದ್ಧನ ಪುತ್ಥಳಿ ತೆರವುಗೊಳಿಸುವಂತೆ ಗ್ರಾಮಸ್ಥರು ಉಪವಿಭಾಗಾಧಿಕಾರಿ ಶೃತಿ ಅವರಿಗೆ ಮನವಿ ಸಲ್ಲಿಸಿದರು.
ಸೋಮವಾರ ಮನವಿ ಸಲ್ಲಿಸಿ ಮಾತನಾಡಿದ ಗ್ರಾಮಸ್ಥರು, ಅನಾದಿಕಾಲದಿಂದ ಗ್ರಾಮದ ಸರ್ವೇ ನಂ.124ರಲ್ಲಿನ ಸರ್ಕಾರಿ ಭೂಮಿಯಲ್ಲಿ ಗ್ರಾಮ ದೇವರ ಉತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಗ್ರಾಮದಲ್ಲಿ ಬುದ್ಧನ ಅನುಯಾಯಿಗಳಿಲ್ಲ. ಹಿಂದುಗಳು ಧಾರ್ಮಿಕ ಕಾರ್ಯಗಳನ್ನು ನಡೆಸುವ ಸ್ಥಳದಲ್ಲಿ ಸ್ಥಳೀಯ ಒಂದೆರಡು ಜನರೊಂದಿಗೆ ಅನ್ಯ ಗ್ರಾಮದ ಹಲವರು ಸೇರಿ ಕಳೆದ ಎರಡು ದಿನಗಳ ಹಿಂದೆ ರಾತ್ರೋರಾತ್ರಿ ಬುದ್ಧನ ಪುತ್ಥಳಿಯನ್ನು ಸ್ಥಾಪಿಸಿದ್ದಾರೆ. ಇದರಿಂದಾಗಿ ಶಾಂತಿಯುತವಾಗಿದ್ದ ಗ್ರಾಮದಲ್ಲಿ ಅಶಾಂತಿ ಸೃಷ್ಟಿಗೆ ಪ್ರಯತ್ನ ನಡೆಸಿದ್ದಾರೆ. ಆದ್ದರಿಂದ, ಬುದ್ಧನ ಪುತ್ಥಳಿ ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.
ಗ್ರಾಮದ ಮುಖಂಡರಾದ ಕೃಷ್ಣೇಗೌಡ, ಪ್ರಸಾದ್ ಗೌಡ, ಪುಟ್ಟಸ್ವಾಮಿಗೌಡ, ರಾಜು ಇದ್ದರು.