

ಹೊಳೆನರಸೀಪುರ: ಬುದ್ಧನ ಅಷ್ಟಾಂಗ ಮಾರ್ಗಗಳನ್ನು ಅನುಸರಿಸಿದರೆ ಜಗತ್ತಿನಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ವಿಶ್ವ ಹಿಂದು ಪರಿಷತ್ ಕಾರ್ಯಕರ್ತ ಹಾಗೂ ಎಸ್‌ಎಲ್‌ಎನ್ ವಿದ್ಯಾಸಂಸ್ಥೆ ಸಂಸ್ಥಾಪಕ ಹೊ.ಸು.ರಮೇಶ್ ಅಭಿಪ್ರಾಯಪಟ್ಟರು.
ಬೈಚನಹಳ್ಳಿ ಗ್ರಾಮಾಂತರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಕೆ.ಕುಮಾರಯ್ಯ ಅವರ ಹೊಳೆನರಸೀಪುರ ಹೌಸಿಂಗ್ ಬೋರ್ಡ್‌ನಲ್ಲಿರುವ ಸಂಬುದ್ಧ ನಿಲಯದಲ್ಲಿ ಸೋಮವಾರ ಆಯೋಜಿಸಿದ್ದ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಏಷ್ಯಾ ಖಂಡದ ಬೆಳಕು ಎಂದೆನಿಸಿದ ಭಗವಾನ್ ಬುದ್ಧನ ತತ್ವ ಇಂದಿನ ಜಾಗತಿಕ ಜಗತ್ತಿನಲ್ಲಿ ಕಿಂಚಿತ್ತಾದರೂ ಪಾಲಿಸುವ ಮೂಲಕ ಶಾಂತಿ ಸ್ಥಾಪನೆಯಾಗಬೇಕಿದೆ. ವಿಶ್ವ ಶಾಂತಿಗಾಗಿ ತಪೋನಿಧಿ ಎನಿಸಿದ್ದ ಬುದ್ಧನ ತತ್ವ, ಬೋಧನೆಗಳು ನೆಲೆಸಿದ್ದು, ಬೆಳವಣಿಗೆ ಕಂಡಿದ್ದು, ಅಂದಿನ ಅಖಂಡ ಭಾರತದ ನೆಲದಲ್ಲಿ. ಇದು ನಮ್ಮ ಹೆಗ್ಗಳಿಕೆಯ ವಿಚಾರವಾಗಿದೆ.
ಸಂಸ್ಕೃತ, ಪಾಳಿ ಭಾಷೆ, ಪ್ರಾಕೃತ ಭಾಷೆಗಳ ತಾಯಿ ಭಾಷೆ ಇದ್ದಂತೆ. ಹಾಗೆಯೇ ಬೌದ್ಧ ಧರ್ಮ ಹಿಂದು ಧರ್ಮದ ಟಿಸಿಲು ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಬುದ್ಧ, ಬಸವರ ಆದರ್ಶವನ್ನು ಅಂಬೇಡ್ಕರ್ ಬಹುವಾಗಿ ಪಾಲಿಸಿದ್ದರು. ಅದನ್ನು ಅನುಸರಿಸಲು ಪ್ರಚೋದಿಸಿದರು. ಇದೆಲ್ಲದರ ಸಾರ ಬೆಳಕು ಅಂದರೆ ಜ್ಞಾನದ ಮಹತ್ವವೇ ಆಗಿದೆ. ಶತ ಶತಮಾನಗಳು ಕಳೆದರೂ ಇಂತಹ ದಾರ್ಶನಿಕರನ್ನು ಸ್ಮರಿಸಲಾಗುತ್ತಿದೆ. ಇದಕ್ಕೆ ಕಾರಣ ಅವರು ಯಾರೂ ಸ್ವಾರ್ಥ ಜೀವನಕ್ಕಾಗಿ ಶ್ರಮಿಸಿದವರಲ್ಲ, ಮಾನವರ ಒಳಿತಿಗಾಗಿ ಶ್ರಮಿಸಿದವರು ಎಂದರು.
ಸಾಹಿತಿ ನಾಗೇಶ್ ಕೌಂಡಿನ್ಯ ಮಾತನಾಡಿ, ಧ್ಯಾನದ ಮೂಲಕ ಸಿದ್ಧಿ ಪಡೆದ ಬುದ್ಧರು, ತಾವು ಪಡೆದ ಜ್ಞಾನವನ್ನು ಜಗತ್ತಿಗೆ ಸಾರಿದರು. ಇವರನ್ನು ನಾವೆಂದೂ ಪವಾಡ ಪುರುಷ ಎನ್ನಲಾಗದು. ಅವರು ಬದುಕಿಗೆ ಬೇಕಿರುವ ನೈಜತೆಯನ್ನು ತಮ್ಮ ತತ್ವದ ಮೂಲಕ ಸಾರಿದರು. ಅಂಗೂಲಿಮಾಲನಂತಹ ಕ್ರೂರನಿಗೂ ದಯೆಯನ್ನು ಬೋಧಿಸಿದರು. ರಾಜ ಪರಂಪರೆಯ ಮೂಲದಲ್ಲಿ ಹುಟ್ಟಿದರೂ ಸನ್ಯಾಸತ್ವ ಪಡೆದು ವಿಶ್ವಕ್ಕೆ ಬೆಳಕಾದ ಬುದ್ಧರ ಸ್ಮರಣೆ ನಮ್ಮಗಳ ಕೃತಜ್ಞತಾ ಪೂರಕವಾಗಬೇಕು. ಅವರು ಬೋಧಿಸಿದಂತೆ ಆಸೆ ದುಖಕ್ಕೆ ಮೂಲ ಎಂಬುದು ಇಂದಿನ ಜಾಗತೀಕರಣದಲ್ಲಿ ಪ್ರಸ್ತುತವೆನಿಸುತ್ತದೆ ಎಂದರು.
ಗಣ್ಯರು ಬುದ್ಧ ಪ್ರತಿಮೆಗೆ ಪೂಜೆ ಸಲ್ಲಿಸಿದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ನಿವೃತ್ತ ಪ್ರಾಂಶುಪಾಲ ಎಚ್.ಎಸ್.ಪುಟ್ಟಸೋಮಪ್ಪ ಯೋಗ ಶಿಕ್ಷಕಿ ಪ್ರೇಮಾ ಮಂಜುನಾಥ್ ಮಾತನಾಡಿದರು.
ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಂಗಾಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ಬಸವ ತತ್ವಜ್ಞಾನಿ ಹಾಗೂ ನಿವೃತ್ತ ಪ್ರಾಂಶುಪಾಲ ಎಚ್.ಎಸ್.ಪ್ರಭುಶಂಕರ್, ಪುರಸಭೆ ಸದಸ್ಯ ಜಗನ್ನಾಥ್, ಹೊಳೆನರಸೀಪುರ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಎ.ಆರ್.ರವಿಕುಮಾರ್, ಕಿರಣ್ ಫರ್ನಿಚರ್ಸ್ ಜೈಪ್ರಕಾಶ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೆಂಕಟೇಶ್, ಶಿಕ್ಷಕ ಡಿ.ಸಿ.ಮಹೇಶಪ್ಪ, ಪುಷ್ಪಲತಾ ಸಾರ್ವಜನಿಕ ಆಸ್ಪತೆಯ ಆಡಳಿತ ವೈದ್ಯಾಧಿಕಾರಿ ಧನ ಶೇಖರ್, ವೈದ್ಯರಾದ ಸೇಲ್ವಕುಮಾರ್, ಎಚ್.ಕೆ.ರಮೇಶ್, ಲೋಕೇಶ್, ಭವ್ಯ, ಕುಸುಮಾ, ಪ್ರತಿಭಾ, ರೇಖಾ, ಸಂಬುದ್ಧ ನಿಲಯದ ಎಚ್.ಎಸ್.ಗೋಪಿಕುಮಾರ್, ವಿಜಯ ಸಚಿನ್, ಗೋಕುಲ್ ಸೇನೆ, ಸುನಂದಾ, ಸುಹಾನ್ ಮೌರ್ಯ, ಗೋಕುಲ್ ಸುರುಚಿ, ರಾಜಮ್ಮ, ಗಂಗೂರ್ ದೇವರಾಜು ಮತ್ತಿತರರಿದ್ದರು.