ಬೀಳಗಿ ಕ್ಷೇತ್ರ ರಾಜ್ಯದಲ್ಲೇ ಮಾದರಿ ಮಾಡುವ ಗುರಿ

bkt-4-5
ಬೀಳಗಿ ನಗರದಲ್ಲಿ ಬಿಜೆಪಿ ಪಕ್ಷದ ಕಚೇರಿಯಲ್ಲಿ ವಿವಿಧ ಗ್ರಾಮಗಳ ಮಹಿಳೆಯರು ಸಚಿವ ಡಾ.ಮುರುಗೇಶ ನಿರಾಣಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.
Published on

ಬಾಗಲಕೋಟೆ: ಡಾ.ಡಿ.ಎಂ. ನಂಜುಂಡಪ್ಪ ವರದಿ ಅನ್ವಯ ರಾಜ್ಯದಲ್ಲೇ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಬೀಳಗಿ ತಾಲೂಕು ಮತ್ತು ಮತಕ್ಷೇತ್ರವನ್ನು ಇಡೀ ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡುವ ಸಂಕಲ್ಪದೊಂದಿಗೆ ನೂರಾರು ಕೋಟಿ ರೂ. ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಈ ಬಾರಿ ಕ್ಷೇತ್ರದ ಜನರು ಅಭಿವೃದ್ಧಿಗೆ ಮತ ನೀಡಿ, ಬಿಜೆಪಿ ಗೆಲ್ಲಿಸುವ ವಿಶ್ವಾಸವಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದರು.

ಬೀಳಗಿ ಕ್ರಾಸ್‌ನ ಬಿಜೆಪಿ ಕಚೇರಿಯಲ್ಲಿ ಕ್ಷೇತ್ರದ ವಿವಿಧ ಗ್ರಾಮಗಳ ಮುಖಂಡರು, ಮಹಿಳೆಯರು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಬಹುತೇಕ ಗ್ರಾಮಗಳು ಮುಳುಗಡೆಯಾಗಿದ್ದು, ಅವುಗಳ ಪುನರ್‌ನಿರ್ಮಾಣ ಕಾರ್ಯ ನಡೆದಿದೆ. ಅಲ್ಲದೇ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ನಮ್ಮ ಅವಽಯಲ್ಲಿ ಬೀಳಗಿ ಕ್ಷೇತ್ರದ ಬಾದಾಮಿ ತಾಲೂಕಿನ ಬರಡು ಭೂಮಿಗೆ ನೀರಾವರಿ ಕಲ್ಪಿಸಲು ಕೆರೂರ ಏತ ನೀರಾವರಿ, ಕಾಡರಕೊಪ್ಪ ಏತ ನೀರಾವರಿ ಯೋಜನೆ ಮಂಜೂರಾಗಿವೆ. ಈ ಯೋಜನೆಗಳು ಪೂರ್ಣಗೊಂಡಲ್ಲಿ, ರೈತರ ಬದುಕು ಹಸನಾಗಲಿದೆ ಎಂದರು.

ಬೀಳಗಿ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಮಾಡುವ ಗುರಿ-ಸಂಕಲ್ಪ ನಮ್ಮದಾಗಿದೆ. ಇದಕ್ಕಾಗಿ ಎಲ್ಲ ರೀತಿಯ ತಯಾರಿ ನಡೆದಿದೆ. ಚಿಕ್ಕಸಂಗಮದಲ್ಲಿ ಸುಂದರ ಉದ್ಯಾನವನ, ಹೆರಕಲ್ ಬ್ಯಾರೇಜ್ ಎತ್ತರಿಸುವುದು, ಕ್ಷೇತ್ರದ ಎಲ್ಲ ಕೆರೆಗಳಿಗೆ ನೀರು ತುಂಬಿಸುವುದು ನಮ್ಮ ಮಹತ್ವದ ಯೋಜನೆಗಳು. ಜನೋಪಯೋಗಿ ಯೋಜನೆಗಳಿಂದ ಜನರ ಆರ್ಥಿಕಮಟ್ಟವೂ ಸುಧಾರಣೆಯಾಗಲಿದೆ ಎಂದು ತಿಳಿಸಿದರು.

ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿಗೆ :
ಬೀಳಗಿ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ಸಚಿವ ಮುರುಗೇಶ ನಿರಾಣಿ ಅವರ ಸಾಮಾಜಿಕ ಕಾರ್ಯಗಳನ್ನು ಮೆಚ್ಚಿ ಕ್ಷೇತ್ರದ ವಿವಿಧ ಗ್ರಾಮಗಳ ನೂರಾರು ಜನ ಮುಖಂಡರು, ಮಹಿಳೆಯರು ಮಂಗಳವಾರ ಬಿಜೆಪಿ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಹನಮಂತ ನಿರಾಣಿ, ಮಲ್ಲಪ್ಪ ಶಂಭೋಜಿ, ರಮೇಶ ಮೋರಟಗಿ, ಮಲ್ಲಿಕಾರ್ಜುನ ಅಂಗಡಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net