

ಕಾರವಾರ: ಬೀದಿಬದಿ ಮಾರಾಟಕ್ಕೆ ಅವಕಾಶ ನೀಡುವಂತೆ ಹಣ್ಣಿನ ಅಂಗಡಿ ಮಾಲೀಕರು ನಗರಸಭೆ ಅಧಿಕಾರಿಗಳನ್ನು ಶನಿವಾರ ಒತ್ತಾಯಿಸಿದರು. ರಸ್ತೆ ಬದಿ ವ್ಯಾಪಾರದಿಂದ ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ನಗರಸಭೆ ಈಜುಗೊಳದ ಹಿಂದಿನ ಖಾಲಿ ಜಾಗದಲ್ಲಿ ಹಣ್ಣು ವ್ಯಾಪಾರ ಮಾಡುವಂತೆ ವ್ಯಾಪಾರಿಗಳಿಗೆ ಸೂಚಿಸಿದೆ. ಆದರೆ, ಅದಕ್ಕೆ ಒಪ್ಪದ ವ್ಯಾಪಾರಸ್ಥರು ತಾವು ರಸ್ತೆ ಬದಿಯಲ್ಲೇ ಕೂರುತ್ತೇವೆ ಎಂದು ಪಟ್ಟು ಹಿಡಿದರು. ಈ ವೇಳೆ ನಗರಸಭೆ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ಪಿ. ನಾಯ್ಕ ಹಾಗೂ ವ್ಯಾಪಾರಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಉಪವಿಭಾಗಾಧಿಕಾರಿ ಪ್ರಿಯಾಂಗಾ ಎಂ. ಸ್ಥಳಕ್ಕಾಗಮಿಸಿ, ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದು, ಅಲ್ಲಿಯವರೆಗೆ ನಗರಸಭೆ ಈಜುಗೊಳದ ಹಿಂದಿನ ಖಾಲಿ ಜಾಗದಲ್ಲಿ ವ್ಯಾಪಾರ ಮಾಡುವಂತೆ ಸೂಚಿಸಿದರು.