

ವಿಜಯವಾಣಿ ಸುದ್ದಿಜಾಲ ಕಾರವಾರ
ವ್ಯಾಪಾರ ಮಾಡಲು ಇಟ್ಟ ವಸ್ತುಗಳನ್ನು ವಶಕ್ಕೆ ಪಡೆದಿದ್ದನ್ನು ಖಂಡಿಸಿ ಬೀದಿ ಬದಿ ವ್ಯಾಪಾರಿಗಳು ನಗರಸಭೆಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಬೀದಿ ಬದಿ ವ್ಯಾಪಾರಸ್ಥರ ಸಂಘಟನೆಯ ಜಿಲ್ಲಾಧ್ಯಕ್ಷ ಅಬ್ಬಾಸ್ ಎಂಬುವವರು ನಗರದ ಜನತಾ ಬಜಾರ್ ಎದುರು ಇಟ್ಟಿದ್ದ ಪರ್ಸ್ ಹಾಗೂ ಇನ್ನಿತರ ಫ್ಯಾನ್ಸಿ ವಸ್ತುಗಳ ಅಂಗಡಿಯನ್ನು ನಗರಸಭೆ ಸಿಬ್ಬಂದಿ ಗುರುವಾರ ಬೆಳಗ್ಗೆ ಎತ್ತಿಕೊಂಡು ಬಂದಿದ್ದರು. ಅಲ್ಲದೆ, ನಗರದಲ್ಲಿ ವಿವಿಧೆಡೆ ಬೀದಿ ಬದಿ ವ್ಯಾಪಾರಸ್ಥರ ತೂಕದ ಕಲ್ಲುಗಳು, ತಕ್ಕಡಿ, ಬುಟ್ಟಿ ಮುಂತಾದವುಗಳನ್ನು ವಶಕ್ಕೆ ಪಡೆದಿದ್ದರು.
ಬೀದಿ ಬದಿ ವ್ಯಾಪಾರಿಗಳು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ನಗರಸಭೆಯಿಂದ ಸ್ಥಳೀಯರು, ಹೊರಗಿನವರು ಎಂದು ತಾರತಮ್ಯ ಮಾಡಲಾಗುತ್ತಿದೆ. ಬಡವರ ಮೇಲೆ ಅಽಕಾರಿಗಳು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ದೂರಿದರು. ನಂತರ ನಗರಸಭೆಗೆ ಮುತ್ತಿಗೆ ಹಾಕಿ ನಮಗೆ ಮೊದಲಿನಂತೆ ಎಲ್ಲೆಡೆ ವ್ಯಾಪಾರ ಮಾಡಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಪೌರಾಯುಕ್ತ ಆರ್.ಪಿ.ನಾಯ್ಕ, ನಗರಸಭೆ ಉಪಾಧ್ಯಕ್ಷ ಪ್ರಕಾಶ ಪಿ.ನಾಯ್ಕ ಮಾತನಾಡಿ, ನಗರದ ಸ್ವಚ್ಛತೆ, ಸಂಚಾರ ನಿಯಮ ಪಾಲನೆ ದೃಷ್ಟಿಯಿಂದ ಬೀದಿ ಬದಿ ಅಂಗಡಿಗಳನ್ನು ಹಾಕುವುದನ್ನು ನಿಷೇಽಸಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಗಿದೆ. ಹೂವು, ಹಣ್ಣಿನ ವ್ಯಾಪಾರಸ್ಥರಿಗೆ ಲೈಬ್ರರಿ ರಸ್ತೆಯಲ್ಲಿ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ. ತರಕಾರಿ, ಮೀನಿಗೂ ಮಾರುಕಟ್ಟೆ ಒದಗಿಸಲಾಗಿದೆ. ಬಟ್ಟೆ, ಎಳನೀರು ಮುಂತಾದವುಗಳನ್ನು ಮಾರಾಟ ಮಾಡುವವರಿಗೆ ಗೂಡಂಗಡಿ ಸಂಖ್ಯೆ ನೀಡಲಾಗಿದೆ. ಹೊಸದಾಗಿ ಅಂಗಡಿಗಳನ್ನು ಹಾಕಿ ವ್ಯಾಪಾರ ಮಾಡಲು ಅವಕಾಶವಿಲ್ಲ. ವ್ಯಾಪಾರಸ್ಥರು ನಗರಸಭೆಯ ನಿಯಮಕ್ಕೆ ಸಹಕಾರ ನೀಡಬೇಕು ಎಂದು ವಿನಂತಿಸಿದರು.
ಅಧ್ಯಕ್ಷ ಡಾ.ನಿತಿನ್ ಪಿಕಳೆ ಸ್ಥಳದಲ್ಲಿಲ್ಲದ ಕಾರಣ ಅವರು ಬಂದ ನಂತರ ಡಿ.೨೬ ರಂದು ಪ್ರತ್ಯೇಕ ಸಭೆ ನಡೆಸಿ ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಯ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಎಲ್ಲಿಯೂ ಅಂಗಡಿ ಇಡಲು ಅವಕಾಶವಿಲ್ಲ. ಮೊದಲಿನ ವ್ಯವಸ್ಥೆಯನ್ನೇ ಮುಂದುವರಿಸಿ ಎಂದರು. ವಶಕ್ಕೆ ಪಡೆದಿದ್ದ ತಕ್ಕಡಿ ಹಾಗೂ ಇನ್ನಿತರ ಸಾಮಗ್ರಿಗಳನ್ನು ವಾಪಸ್ ನೀಡಿದರು.