ಬೀಜಾಸುರನನ್ನು ನಿಯಂತ್ರಿಸಬಲ್ಲದು ಈ ದುಂಬಿ!!

IMG-20220816-WA0053.jpg
Published on

ವಿಜಯಯವಾಣಿ ಸುದ್ದಿಜಾಲ ಕಾರವಾರ ಬೀಜಾಸುರ ಎಂದೇ ಪ್ರಸಿದ್ಧವಾಗಿರುವುದು ಪಾರ್ಥೇನಿಯಂ ಕಳೆ. ಇವುಗಳ ನಿಯಂತ್ರಣದ ಬಗ್ಗೆ ಶಿರಸಿಯ ಕೃಷಿ ವಿಜ್ಞಾನ ಕೇಂದ್ರವು ಆ. 16 ರಿಂದ 22 ರವರೆಗೆ ಜಾಗೃತಿ ಅಭಿಯಾನ ಆರಂಭಿಸಿದೆ. ಮುಖ್ಯವಾಗಿ ಮೆಕ್ಸಿಕನ್ ದುಂಬಿಗಳನ್ನು ಬಿಟ್ಟು ನಿಯಂತ್ರಣಕ್ಕೆ ಪ್ರಾಯೋಗಿಕವಾಗಿ ತೋರಿಸಲಾಗುತ್ತಿದೆ.

ಬೀಜಾಸುರ:ಸ್ಥಳೀಯವಾಗಿ ಕ್ಯಾರೆಟ್ ಕಳೆ, ಕಾಂಗ್ರೇಸ್ ಕಳೆ, ನಕ್ಷತ್ರ ಕಳೆ, ಚಟಕ್ ಚಾಂದನಿ, ಬಿಳಿ ಟೋಪಿ ಅಥವಾ ಗರಜ್‌ಘಸ್ ಎಂದು ಕರೆಯಲಾಗುತ್ತದೆ. ಆಪತ್ಕಾಲದಲ್ಲಿ ಆಹಾರಧಾನ್ಯಗಳನ್ನು ವಿದೇಶಗಳಿಂದ ತರಿಸಿಕೊಂಡ ಬೆನ್ನಲ್ಲೇ ಬಂದ ಬೀಜಾಸುರ  ಈ ಪಾರ್ಥೇನಿಯಂ. ಒಂದು ಗಿಡ ವರ್ಷಕ್ಕೆ 25 ರಿಂದ 50 ಸಾವಿರ ಬೀಜೋತ್ಪತ್ತಿ ಮಾಡಬಹುದು. ತೋಟ ಮತ್ತು ಅರಣ್ಯವನ್ನು ಅತಿಕ್ರಮಣ ಮಾಡಿಕೊಂಡು ಅವುಗಳ ಉತ್ಪಾದಕತೆಯನ್ನು ಕಡಿಮೆ ಮಾಡುವುದಲ್ಲದೆ, ಜೀವವೈವಿಧ್ಯಕ್ಕೆ ಹಾಗೂ ಪರಿಸರಕ್ಕೆ ಹಾನಿಯುಂಟು ಮಾಡುತ್ತದೆ.
ಪಾರ್ಥೇನಿಯಂ ವಿಷಕಾರಿ, ವಿನಾಶಕಾರಿ, ಸಮಸ್ಯಾತ್ಮಕ, ಅಲರ್ಜಿ ಉಂಟು ಮಾಡುವ ಆಕ್ರಮಣಕಾರಿ ಕಳೆಯಾಗಿದ್ದು, ಮಾನವನಿಗೆ ಮತ್ತು ಜಾನುವಾರಗಳಿಗೆ ಗಂಭೀರವಾದ ಸಮಸ್ಯೆಯನ್ನುಂಟು ಮಾಡುತ್ತದೆ.

ದುಂಬಿಯಿಂದ ನಿಯಂತ್ರಣ:ಮೆಕ್ಸಿಕನ್ ದುಂಬಿಗಳನ್ನು ಬಿಡುವ ಮೂಲಕ ರಾಕ್ಷಸ ಕಳೆ ಪಾರ್ಥೇನಿಯಂ ನಿಯಂತ್ರಿಸಬಹುದು ಎಂದು ಶಿರಸಿ‌ ಕೃಷಿ ವಿಜ್ಞಾನ ಕೇಂದ್ರದ ಕೀಟ ಶಾಸ್ತ್ರಜ್ಞೆ ಡಾ.ರೂಪಾ ಹೇಳಿದರು.
ಧಾರವಾಡದ ಕೃಷಿ ವಿವಿಯ ಶಿರಸಿ ಕೃಷಿ ವಿಜ್ಞಾನ ಕೇಂದ್ರದಿಂದ ಆ.16 ರಿಂದ 22 ರವರೆಗೆ ಪಾರ್ಥೇನಿಯಂ ನಿಯಂತ್ರಣ ಜಾಗೃತಿ ಸಪ್ತಾಹವನ್ನು ಆಯೋಜಿಸಲಾಗಿದ್ದು, ಅದಕ್ಕೆ ಚಾಲನೆ ನೀಡಿ ಮಾತನಾಡಿದರು.
ಜೈಗೋಗ್ರಾಮ ಬೈಕೊಲೋರಾಟ ಎಂಬ ವೈಜ್ಞಾನಿಕ‌ ಹೆಸರಿರುವ ಮೆಕ್ಸಿಕನ್‌ ದುಂಬಿಗಳನ್ನು  ಕಳೆ ಬೆಳೆದಿರುವ ಪ್ರದೇಶಗಳಲ್ಲಿ ಬಿಡುವುದುರಿಂದ, ದುಂಬಿಗಳು ಕಳೆಯ ಎಲೆ ಹಾಗೂ ಗಿಡದ ಇತರೆ ಭಾಗಗಳನ್ನು ತಿಂದು ಅದರ ಬೆಳವಣಿಗೆ ಹಾಗೂ ಬೀಜೋತ್ಪಾದನೆಯನ್ನು ನಿಯಂತ್ರಣ ಮಾಡುತ್ತವೆ. ಈ ದುಂಬಿಗಳು ಕಡಿಮೆ ಉಷ್ಣಾಂಶ ಇರುವ ಸಮಯದಲ್ಲಿ  ಅಂದರೆ, ಮಳೆಗಾಲದ ಪ್ರಾರಂಭದಲ್ಲಿ ಬಿಡುಗಡೆ ಮಾಡುವುದು ಸೂಕ್ತ. ಈ ದುಂಬಿಗಳು ಮಳೆಗಾಲದಲ್ಲಿ ಮಾತ್ರ ಕಾರ್ಯನಿರ್ವಹಣೆ ಮಾಡಲು ಸಫಲವಾಗುತ್ತವೆ. ಮಳೆಗಾಲ ಮುಗಿದ ನಂತರ ಅವು ಕೋಶಾವಸ್ತೆಗೆ ತಲುಪುತ್ತವೆ. ಮತ್ತೆ ಮಳೆಗಾಲ ಪ್ರಾರಂಭವಾದ ಮೇಲೆ ಮಾತ್ರ ಇವು ತಮ್ಮ ಕಾರ್ಯವನ್ನು ಪುನಃ ಪ್ರಾರಂಭಿಸುತ್ತವೆ. ಒಂದು ಎಕರೆ ಪ್ರದೇಶದಲ್ಲಿ, ಸುಮಾರು 2500 ಮೆಕ್ಸಿಕನ್ ದುಂಬಿಗಳನ್ನು ಬಿಡಬೇಕು. ಈ ದುಂಬಿಗಳು ವರ್ಷದಿಂದ ವರ್ಷಕ್ಕೆ ಸ್ವತಃ ವೃದ್ಧಿಯಾಗುವುದರಿಂದ ಪ್ರಾರಂಭದಲ್ಲಿ ಸ್ವಲ್ಪ ಖರ್ಚು ಎನಿಸಿದರೂ, ಕಳೆಯನ್ನು ಕ್ರಮೇಣ ನಿರ್ವಹಣೆ ಮಾಡುವಲ್ಲಿ ಸಹಾಯವಾಗುತ್ತದೆ. ಈ ದುಂಬಿಗಳು ಸ್ವತಃ ತಾವೇ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹರಡಿ ಪಾರ್ಥೇನಿಯಂ ಕಳೆಯನ್ನು ನಿಯಂತ್ರಿಸುತ್ತವೆ. ಈ ದುಂಬಿಗಳು ಪಾರ್ಥೇನಿಯಂ  ಕಳೆಯನ್ನು ತಿನ್ನುವಾಗ ಕಳೆಯನ್ನು ಕಿತ್ತುಹಾಕುವುದಾಗಲಿ ಅಥವಾ ಕೊಚ್ಚುವುದನ್ನಾಗಲಿ ಮಾಡಬಾರದು. ಕಳೆಯನ್ನು ಕಿತ್ತು ಹಾಕಬೇಕೆಂದಿದ್ದರೆ, ಮಳೆಯ ಅಂತ್ಯದಲ್ಲಿ ಅಂದರೆ ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಕಿತ್ತು ಹಾಕಬಹುದು ಎನ್ನುತ್ತಾರೆ ಕೆ.ವಿ.ಕೆ. ಕೀಟ ಶಾಸ್ತ್ರಜ್ಞೆ ಡಾ.ರೂಪಾ.



ಒಬ್ಬ ವ್ಯಕ್ತಿಯಿಂದ, ಒಂದು ಜಾಗ ಮತ್ತು ಒಂದೇ ಬಾರಿಗೆ ಈ ಕಳೆಯ ನಿರ್ಮೂಲನೆ ಅಸಾಧ್ಯ. ಸಾಮೂಹಿಕ ಕಳೆ ನಿರ್ಮೂಲನಾ ಕಾರ್ಯಕ್ರಮಗಳನ್ನು ನಿಯಮಿತವಾಗಿ ಕೈಗೊಂಡಾಗ ಸಂಪೂರ್ಣ ನಿರ್ಮೂಲನೆ ಸಾಧ್ಯ ಎಂಬುದು ಅವರ ಅಭಿಪ್ರಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net