

ಸುಭಾಸ ಧೂಪದಹೊಂಡ ಕಾರವಾರ
ಬಿದಿರು ಬೆಳೆ, ಕೈಗಾರಿಕೆ ಹಾಗೂ ರಫ್ತಿಗೆ ರಾಷ್ಟ್ರೀಯ ಬಾಂಬೂ ಮಿಷನ್ ಹೇರಳ ಪ್ರೋತ್ಸಾಹ ನೀಡುತ್ತಿದ್ದು, ಜಿಲ್ಲೆಯಲ್ಲೂ ಹೈಬ್ರಿಡ್ ಬಿದಿರು ತಳಿಗಳನ್ನು ಬೆಳೆಯಲು ಉತ್ತೇಜಿಸಲಾಗುತ್ತಿದೆ.
ರೈತರಿಗೆ ಬಿದಿರು ನಾಟಿಗೆ ಸಬ್ಸಿಡಿ ಹಾಗೂ ಖರೀದಿಯ ಭರವಸೆಯೊಂದಿಗೆ ಪ್ರಚಾರ ನಡೆಸಲಾಗುತ್ತಿದೆ. ಕೃಷಿ ಭಾರತ ಫೌಂಡೇಷನ್ ರಾಷ್ಟ್ರೀಯ ಬಾಂಬೂ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರುವ ಜವಾಬ್ದಾರಿ ವಹಿಸಿಕೊಂಡಿದ್ದು, ಸಸಿಗಳನ್ನು ಪೂರೈಸುವ ಹಾಗೂ ಬಿದಿರನ್ನು ಮರಳಿ ಪಡೆಯುವ ಒಪ್ಪಂದವನ್ನೂ ಮಾಡಿಕೊಳ್ಳುತ್ತಿದೆ.
ಆರ್ಟ್ ಆಫ್ ಲೀವಿಂಗ್ನ ಗ್ರಾಮೀಣಾಭಿವೃದ್ಧಿ ವಿಭಾಗ ಜಿಲ್ಲೆಯಲ್ಲಿ ಈ ಕುರಿತು ಪ್ರಚಾರ ಕೈಗೊಳ್ಳುತ್ತಿದೆ. ಪ್ರತಿ ಗ್ರಾಪಂಗೆ ಒಬ್ಬ ಸಿಬ್ಬಂದಿಯನ್ನೂ ನೇಮಿಸಿ ಇದೇ ವರ್ಷದಿಂದ ನಾಟಿ ಮಾಡಲು ರೈತರಿಗೆ ಪ್ರೇರೇಪಿಸುತ್ತಿದೆ. ಜಿಲ್ಲೆಯಲ್ಲಿ 1 ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ಬಾಂಬೂ ಬೆಳೆದಲ್ಲಿ ಇಲ್ಲಿಯೇ ಮೌಲ್ಯವರ್ಧನೆ ಘಟಕವನ್ನೂ ತೆರೆಯಲು ಬಾಂಬು ಮಿಷನ್ ಸಿದ್ಧವಿದೆ. ರೈತರು ನೇರವಾಗಿ ರಾಷ್ಟ್ರೀಯ ಬಾಂಬೂ ಮಿಷನ್ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನಂತರ ಬೆಳೆಯಲು ಅರ್ಜಿ ಸಲ್ಲಿಸಬಹುದು. ಅರಣ್ಯ ಇಲಾಖೆ ಕಚೇರಿಯಲ್ಲೂ ಇದರ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಎನ್ನುತ್ತಾರೆ ಆರ್ಟ್ ಆಫ್ ಲೀವಿಂಗ್ ಅಧಿಕಾರಿಗಳು. ಹೆಚ್ಚಿನ ಮಾಹಿತಿಗಾಗಿ ವಲಯ ಪ್ರಭಾರಿಯಾದ ಪ್ರಶಾಂತ ಜೋಶಿ ಶಿವಳಮನೆ ಅವರನ್ನು (94814-58945) ಸಂರ್ಪಸಬಹುದು.
ಏನಿದು ಯೋಜನೆ?: ದೇಶದಲ್ಲಿ 1200 ಜಾತಿಯ ಬಿದಿರಿದೆ. ಆದರೆ, ಸದ್ಯ ವಾಣಿಜ್ಯ ದೃಷ್ಟಿಯಿಂದ ಅಂಗಾಂಶ ಕೃಷಿಯಲ್ಲಿ ಸಿದ್ಧಪಡಿಸಿದ, ಮುಳ್ಳಿಲ್ಲದ, ಹೂವಾಗದ ಬಿದಿರು ಬೆಳೆಯಬೇಕು ಎಂದು ಬಾಂಬೂ ಮಿಷನ್ ಶಿಫಾರಸು ಮಾಡಿದೆ. ರಾಜ್ಯದಲ್ಲಿ 6 ರಿಂದ 8 ಬಿದಿರಿನ ತಳಿಗಳಿವೆ. ಜಮೀನಿನ ಪರಿಸ್ಥಿತಿಗೆ ಅನುಗುಣವಾಗಿ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಏಕ ಬೆಳೆಯಾಗಿ ಜಮೀನಿನಲ್ಲಿ ಬಿದಿರು ನಾಟಿ ಮಾಡುವುದಿದ್ದಲ್ಲಿ ಭೀಮಾ ಬಾಂಬೂ ಉತ್ತಮ. ಸಾಲಿನಿಂದ ಸಾಲಿಗೆ 10 ಅಡಿ ಗಿಡದಿಂದ ಗಿಡಕ್ಕೆ 5 ಅಡಿ ಅಂತರದಲ್ಲಿ ನಾಟಿ ಮಾಡಬಹುದು ಎನ್ನುತ್ತಾರೆ ತಜ್ಞರು. ಭೀಮಾ ಬಾಂಬೂ 400 ಗಿಡಗಳನ್ನು ನಾಟಿ ಮಾಡಿದರೆ ರಾಷ್ಟ್ರೀಯ ಬಾಂಬೂ ಮಿಷನ್ನಿಂದ 50 ಸಾವಿರ ರೂ. ಸಹಾಯಧನ ಸಿಗಲಿದೆ. ರೈತರು ಮೊದಲು 16 ಸಾವಿರ ರೂಪಾಯಿ ನೀಡಿ ಗಿಡಗಳನ್ನು ಖರೀದಿಸಬೇಕಾಗುತ್ತದೆ. ನಂತರ 25 ಸಾವಿರ ರೂ. ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತದೆ. ಇನ್ನುಳಿದ 25 ಸಾವಿರ ರೂ. ಒಂದು ವರ್ಷದ ನಂತರ ಖಾತೆ ಸೇರಲಿದೆ.
ಬೆಟ್ಟದಲ್ಲೂ ಬೆಳೆಯಬಹುದು: ಹುಲ್ಲಿನ ಜಾತಿಗೆ ಸೇರಿದ ಬಿದಿರನ್ನು 1927 ರ ಅರಣ್ಯ ಕಾಯ್ದೆಯಲ್ಲಿ ಮರ ಎಂದು ಪರಿಗಣಿಸುತ್ತಿದ್ದರು. ಇದರಿಂದ ಇದನ್ನು ಕಡಿಯಲು ನಿರ್ಬಂಧವಿತ್ತು. 2017 ರಲ್ಲಿ ಸರ್ಕಾರ ಈ ನಿರ್ಬಂಧ ತೆಗೆದು ಹಾಕಿದೆ. ಇದರಿಂದ ತೋಟಕ್ಕೆ ಬಿಟ್ಟಿರುವ ಬೆಟ್ಟದಲ್ಲೂ ಬಿದಿರನ್ನು ನಾಟಿ ಮಾಡಬಹುದು. ಅದಕ್ಕೂ ಸಹಾಯಧನ ದೊರೆಯಲಿದೆ. ಬೆಟ್ಟದಲ್ಲಿ 400 ಗಿಡ ನಾಟಿ ಮಾಡಿದರೆ ಕನಿಷ್ಠ 40 ಸಾವಿರ ರೂ. ಸಹಾಯಧನ ದೊರೆಯಲಿದೆ. ಕಟಾವಿನ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಒಪ್ಪಿಗೆ ಪಡೆದು ಶೇ.25 ರಷ್ಟು ಆದಾಯವನ್ನು ಇಲಾಖೆಗೆ ನೀಡಬೇಕಿದೆ.
ಸುಲಭದ ಬೆಳೆ: ಬಿದಿರು ಅತ್ಯಂತ ಸುಲಭದ ಬೆಳೆ. ಎಲ್ಲ ರೀತಿಯ ವಾತಾವರಣದಲ್ಲೂ, ಕನಿಷ್ಠ ನೀರಿನಲ್ಲಿ ಇದನ್ನು ಬೆಳೆಯಬಹುದು. ಅದಕ್ಕೆ ನಿರ್ವಹಣೆಯ ಅವಶ್ಯಕತೆ ಇಲ್ಲ. ರೋಗ ಇರುವುದಿಲ್ಲ. ಒಮ್ಮೆ ನಾಟಿ ಮಾಡಿದರೆ ಮೂರು ವರ್ಷ ಕಾಳಜಿ ಮಾಡಿದರೆ ಸಾಕು, ಅದು ನೂರು ವರ್ಷ ಆದಾಯ ನೀಡುತ್ತದೆ. ಮೂರನೇ ವರ್ಷಕ್ಕೆ ಮೊದಲ ಬಾರಿ ಸುಮಾರು 2 ಲಕ್ಷ ಆದಾಯ ಗಳಿಸಬಹುದು. ನಂತರ ನಿರಂತರವಾಗಿ ಪ್ರತಿ ವರ್ಷ ಆದಾಯ ಗಳಿಸಬಹುದು ಎಂಬುದು ತಜ್ಞರ ಅಭಿಪ್ರಾಯ.
ಆರ್ಟ್ ಆಫ್ ಲೀವಿಂಗ್ ಸಂಸ್ಥೆ ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ರಾಷ್ಟ್ರೀಯ ಬಿದಿರು ಯೋಜನೆ ಪ್ರಚಾರ ಮಾಡುತ್ತಿದೆ. ಜನರಿಗೆ ಉಚಿತ ನೋಂದಣಿ, ಸಲಹೆಗಳನ್ನು ಉಚಿತವಾಗಿ ನೀಡುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲೂ ಇದನ್ನು ಮಾಡುವ ಬಗ್ಗೆ ಪ್ರಚಾರ ನಡೆದಿದೆ.
ಪ್ರಶಾಂತ ಜೋಶಿ ಶಿವಳಮನೆ ಆರ್ಟ್ ಆಫ್ ಲೀವಿಂಗ್ ವಲಯ ಪ್ರಭಾರಿ