

ಶಿರಸಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಆಹಾರಕ್ಕಾಗಿ ಅಲೆದಾಡುತ್ತಿದ್ದ ಬಿಡಾಡಿ ದನಗಳಿಗೆ ಇಲ್ಲಿನ ಯುವಕರ ತಂಡವೊಂದು ನಿತ್ಯ ಆಹಾರವನ್ನು ಒದಗಿಸುವ ಕೆಲಸ ಮಾಡುತ್ತಿದೆ. 10 ದಿನಗಳಿಂದ ಪ್ರತಿನಿತ್ಯ ಎರಡು ತಾಸು ಊರೆಲ್ಲ ಸಂಚರಿಸಿ, ಸುಮಾರು 150 ದನಗಳಿಗೆ ಈ ಯುವಕರು ಆಹಾರ ನೀಡುತ್ತಿದ್ದಾರೆ.
ಬೆಳಗ್ಗೆ ತರಕಾರಿ ಮಾರುಕಟ್ಟೆಗೆ ಹೋಗುವ ಇವರು, ಸಗಟು ವ್ಯಾಪಾರಸ್ಥರಿಂದ ಬೇಡದ ತರಕಾರಿಗಳನ್ನು ಪಡೆಯುತ್ತಾರೆ. 15 ಚೀಲದಷ್ಟು ಹಾಳಾಗಲು ಬಂದಿರುವ ತರಕಾರಿ ಇಲ್ಲಿ ಇವರಿಗೆ ಸಿಗುತ್ತದೆ. ಜತೆಗೆ, ಸ್ವೀಟ್ ಕಾರ್ನ್ ಕುಂಡಿಗೆಗಳು ಸಿಗುತ್ತವೆ. ಅವುಗಳನ್ನು ಸಣ್ಣ ತುಂಡು ಮಾಡಿ, ಎಲ್ಲವನ್ನೂ ಸೇರಿಸಿ, ವಾಹನದಲ್ಲಿ ಹಾಕಿಕೊಂಡು ನಗರ ಸಂಚಾರ ಮಾಡುತ್ತಾರೆ. ದನಗಳು ಇವರು ಬರುವುದನ್ನೇ ಕಾಯುತ್ತಿರುತ್ತವೆ. ಅವುಗಳ ಎದುರು ಈ ತರಕಾರಿ ಸುರುವಿದರೆ ಅವರನ್ನು ತಿಂದು ಹಸಿವು ನೀಗಿಸಿಕೊಳ್ಳುತ್ತಿವೆ.
ಲಾಕ್ಡೌನ್ ಆರಂಭವಾದ ಮೇಲೆ ಜಾನುವಾರುಗಳಿಗೆ ಸರಿಯಾಗಿ ಆಹಾರ ಸಿಗುವುದಿಲ್ಲ. ಗೋ ಸೇವೆ ನಮಗೆ ಖುಷಿಯ ಕೆಲಸ. ಹೀಗಾಗಿ, ಪ್ರತಿದಿನ ಸಂಜೆ ಎರಡು ತಾಸು ಸಮಯವನ್ನು ಇದಕ್ಕಾಗಿ ಮೀಸಲಿಡುತ್ತಿದ್ದೇವೆ. | ಆನಂದ ಗೌಳಿ- ತಂಡದ ಪ್ರಮುಖ