

ಶಿಗ್ಗಾಂವಿ: ಪಕ್ಷದ ತತ್ವ್ತ ಸಿದ್ದಾಂತದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಜನತಾ ಪಕ್ಷ ರಾಜ್ಯ ಮತ್ತು ರಾಷ್ಟ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು, ದೇಶದಲ್ಲಿಯೇ ಅತಿ ಹೆಚ್ಚು ಕಾರ್ಯಕರ್ತರ ಪಡೆ ಹೊಂದಿದ ಏಕೈಕ ಪಕ್ಷವಾಗಿದೆ ಎಂದು ಧಾರವಾಡ ವಿಭಾಗ ಸಂಘಟನಾ ಅಧ್ಯಕ್ಷ ಲಿಂಗರಾಜ ಪಾಟೀಲ ಹೇಳಿದರು.
ತಾಲೂಕಿನ ಬಾಡ ಗ್ರಾಮದ ಕನಕ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿರುವ ಬಿಜೆಪಿ ಶಿಗ್ಗಾಂವಿ-ಸವಣೂರ ತಾಲೂಕು ಮಂಡಲದ ಪ್ರಶಿಕ್ಷಣ ಪ್ರಕೋಷ್ಠ ವರ್ಗ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಈಗಾಗಲೇ ರಾಜ್ಯದಲ್ಲಿ ನಮ್ಮ ಸರ್ಕಾರ ಇದೆ ಎಂದು ಅಸಡ್ಡೆ ಮಾಡದೇ ಮುಂಬರುವ ಗ್ರಾಪಂ ಚುನಾವಣೆಗಳಲ್ಲಿಯೂ ಯಶಸ್ವಿಯಾಗುವ ನಿಟ್ಟಿನಲ್ಲಿ ಪಕ್ಷವನ್ನು ತಳಮಟ್ಟದಿಂದ ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಪ್ರಶಿಕ್ಷಣ ಪ್ರಕೋಷ್ಠ ವರ್ಗ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.
ಶಿಗ್ಗಾಂವಿ ಬಿಜೆಪಿ ಮಂಡಲದ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಪ್ರಶಿಕ್ಷಣ ಅಭ್ಯಾಸ ವರ್ಗದಲ್ಲಿ ಪದಾಧಿಕಾರಿಗಳಿಗೆ ಬಿಜೆಪಿ ನಡೆದು ಬಂದ ದಾರಿ, ಪಕ್ಷದ ಕಾರ್ಯ ಪದ್ಧತಿ ಮತ್ತು ಸಂಘಟನೆಯಲ್ಲಿ ನಮ್ಮ ಪಾತ್ರ, ಇಂದಿನ ಭಾರತದ ಮುಖ್ಯ ವಿಚಾರಧಾರೆ, 2014ರ ನಂತರ ಬದಲಾದ ಭಾರತದ ರಾಜಕಾರಣ ಮತ್ತು ನಮ್ಮ ಜವಾಬ್ದಾರಿ, ಸಾಮಾಜಿಕ ಜಾಲತಾಣದ ಉಪಯೋಗ, ರಕ್ಷಣಾ ಸಾಮರ್ಥ್ಯದ ಜೊತೆಗೆ ಆತ್ಮನಿರ್ಭರ ಭಾರತದ ಸಂಕಲ್ಪ ಕುರಿತು ಹಿರಿಯ ಬಿಜೆಪಿ ಪದಾಧಿಕಾರಿಗಳಿಂದ ಗೋಷ್ಠಿ ಜರುಗಲಿದೆ ಎಂದರು.
ಧಾರವಾಡ ವಿಭಾಗ ಮಂಡಲದ ಕಾರ್ಯದರ್ಶಿ ಜಯತೀರ್ಥ ಕಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸವಣೂರ ಬಿಜೆಪಿ ಮಂಡಲದ ಅಧ್ಯಕ್ಷ ಗಂಗಾಧರ ಬಾಣದ, ಶೋಭಾ ನಿಸ್ಸೀಮಗೌಡ್ರ, ಶಶಿಧರ ಹೊಸಳ್ಳಿ, ನರಹರಿ ಕಟ್ಟಿ, ಬಸವರಾಜ ನಾರಾಯಣಪುರ, ಶಿವರಾಜ ರಾಯಣ್ಣವರ, ರೇಣುಕನಗೌಡ ಪಾಟೀಲ, ವಿಶ್ವನಾಥ ಹರವಿ, ಮಹಾಂತೇಶ ತರ್ಲಘಟ್ಟ, ಉಷಾ ಬಿಳೆಕುದರಿ, ಸಂಜನಾ ರಾಯ್ಕರ ಇತರರು ಉಪಸ್ಥಿತರಿದ್ದರು.