ಬಿಜೆಪಿಗೆ ಮತ ಹಾಕಿದರೆ ಬದುಕು ಬೀದಿಗೆ

bkt-24-7
Published on

ಬಾಗಲಕೋಟೆ: ಕೇಂದ್ರದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾದರೆ ಜನಸಾಮಾನ್ಯರ ಬದುಕು ಬೀದಿಗೆ ಬರುವುದು ನಿಶ್ಚಿತ ಎಂದು ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಆತಂಕ ವ್ಯಕ್ತಪಡಿಸಿದರು.

ಕಟಗೇರಿಯಲ್ಲಿ ಬುಧವಾರ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ಹತ್ತು ವರ್ಷಗಳಲ್ಲಿ ದೇಶಕ್ಕೆ ನೀಡಿದ ಕೊಡುಗೆ ಏನು ಎಂದು ಆತ್ಮಾವಲೋಕನ ಮಾಡಿಕೊಂಡು ಮತ ಚಲಾಯಿಸಬೇಕಾಗಿದೆ. ಯಾವುದೇ ವ್ಯಕ್ತಿ ಅಥವಾ ನಾಯಕತ್ವದ ಬಗ್ಗೆ ಟೀಕೆ ಮಾಡಲು ಹೋಗುವುದಿಲ್ಲ. ಆದರೆ ಅಧಿಕಾರದಲ್ಲಿದ್ದಾಗ ಮಾಡಿದ್ದೇನು? ಎಂಬುದನ್ನು ಕೇಳಬೇಕಾಗುತ್ತದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಚುನಾವಣೆ ವೇಳೆ ಮತದಾರರಿಗೆಕೊಟ್ಟ ವಚನದಂತೆ ಐದೂ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿದೆ. ಬಿಜೆಪಿ ಬಗ್ಗೆ ಮೃದು ಧೋರಣೆ ಹೊಂದಿರುವ ಪತ್ರಿಕಳೂ ಕೂಡ ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಂಪಾದಕೀಯ ಬರೆದಿವೆ. ಬಡಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳು ಆಸರೆಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿವೆ ಎಂದು ಹೇಳಿದರು.

ರಾಜ್ಯದಲ್ಲಿ ಘೋಷಣೆ ಮಾಡಿದಂತೆ ಕೇಂದ್ರದಲ್ಲೂ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಕಾಂಗ್ರೆಸ್‌ ನೇತೃತ್ವದ ಸರ್ಕಾರ ರಚನೆಯಾದರೆ ಈ ಗ್ಯಾರಂಟಿಗಳೂ ಅನುಷ್ಠಾನಕ್ಕೆ ಬರಲಿವೆ. ಒಂದು ವೇಳೆ ಕೊಟ್ಟ ಮಾತು ತಪ್ಪಿದರೆ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲು ನಿಮಗೆ ಅವಕಾಶವಿದೆ ಎಂದರು.

ಕೇಂದ್ರದ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರ ಪತಿ ಪರಕಾಲ ಪ್ರಭಾಕರ್‌ ಅವರು ಚುನಾವಣಾ ಬಾಂಡ್‌ ಅಕ್ರಮ ವಿಶ್ವದಲ್ಲೇ ಅತಿ ದೊಡ್ಡ ಹಗರಣ ಎಂದು ಹೇಳಿದ್ದಾರೆ. ಬಿಜೆಪಿಯಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ಸುಬ್ರಹ್ಮಣ್ಯಂ ಸ್ವಾಮಿ ಕೂಡ ಕೇಂದ್ರ ನಾಯಕತ್ವದ ಬಗ್ಗೆ ಕಿಡಿ ಕಾರಿದ್ದಾರೆ. ಸ್ವಪಕ್ಷಿಯರೇ ಟೀಕೆ ಮಾಡುತ್ತಿರುವಾಗ ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಂದಿಗೂ ಜನಸಾಮಾನ್ಯರ ಪರವಾದ ಆಡಳಿತ ನೀಡುವುದಿಲ್ಲ. ಶ್ರೀಮಂತ ಉದ್ಯಮಿಗಳ ಪರವಾಗಿಯೇ ಅವರ ನಿಲುವು ಇದೆ. ಹೀಗಾಗಿಯೇ ದೊಡ್ಡ ದೊಡ್ಡ ಉದ್ಯಮಿಗಳ ಬೃಹತ್‌ ಪ್ರಮಾಣದ ಸಾಲ ಮನ್ನಾ ಮಾಡಿದರೇ ಹೊರತು ರೈತರ ಸಾಲ ಮನ್ನಾ ಮಾಡಲಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತ ಪಾಟೀಲ ಮಾತನಾಡಿ, ಕೆಲ ಬಿಜೆಪಿ ನಾಯಕರು  ಮನಮೋಹನ್‌ ಸಿಂಗ್‌ ಮೌನದ ಬಗ್ಗೆ ಟೀಕೆ ಮಾಡುತ್ತಾರೆ. ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ಮಾತನಾಡಲು ಹೋಗಲಿಲ್ಲ. ಕೆಲಸ ಮಾಡಿ ತೋರಿಸಿದರು. ದೇಶದಲ್ಲಿ ರೈತರ ಸಾಲ ಮನ್ನಾ ಮಾಡಿದ ಪ್ರಧಾನಿ ಎಂಬ ಹೆಗ್ಗಳಿಕೆ ಅವರದು ಎಂದು ಹೇಳಿದರು.

ಕೇಂದ್ರದ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರು ಕರ್ನಾಟಕದ ಬಗ್ಗೆ ಲಘುವಾಗಿ ಮಾತನಾಡಿದ್ದನ್ನು ರಾಜ್ಯದ ರೈತರು ಯಾವುದೇ ಕಾರಣಕ್ಕೂ ಮರೆಯಬಾರದು. ರಾಜ್ಯದಿಂದಲೇ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ಕರ್ನಾಟಕದ ರೈತರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಬರಕ್ಕೆ ತುತ್ತಾಗಿರುವ ರೈತರ ನೆರವಿಗೆ ಧಾವಿಸಬೇಕಾದ ವಿತ್ತ ಮಂತ್ರಿ, ಗ್ಯಾರಂಟಿ ಯೋಜನೆ ಜಾರಿ ಮಾಡಿ ಬೊಕ್ಕಸ ಬರಿದುಮಾಡಿಕೊಂಡು ದಿವಾಳಿಯಾಗಿ ನಮ್ಮ ಬಳಿ ಕೇಳುತ್ತಿದ್ದೀರಿ ಎಂದು ಲಘುವಾಗಿ ಮಾತನಾಡಿದ್ದಾರೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರವೇನೂ ಕೇಂದ್ರದ ಬಳಿ ಬಿಕ್ಷೆ ಕೇಳುತ್ತಿಲ್ಲ. ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ. ರಾಜ್ಯದಿಂದ ಸಂಗ್ರಹವಾಗಿರುವ ತೆರಿಗೆಯಲ್ಲಿ ನಮ್ಮ ಪಾಲನ್ನು ಕೊಡಿ ಎಂದು ಕೇಳುತ್ತಿದ್ದೇವೆ. ಕರ್ನಾಟಕದ ರೈತರು ಬಿಕ್ಷುಕರಲ್ಲ ಎಂದು ವಾಗ್ದಾಳಿ ಮಾಡಿದರು.

ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದರು. ಯುವಕರಿಗೆ ಉದ್ಯೋಗ ಕೊಡುತ್ತೇವೆ ಎಂದರು. ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ 15 ಲಕ್ಷ ರೂ. ಜಮಾ ಮಾಡುತ್ತೇವೆ ಎಂದು ಮಾತು ಕೊಟ್ಟರು. ಆದರೆ ಒಂದೇ ಒಂದು ಮಾತನ್ನು ಅವರು ಉಳಿಸಿಕೊಳ್ಳಲಿಲ್ಲ. ಸುಳ್ಳಿನ ಮೇಲೆ ಸುಳ್ಳು ಹೇಳುತ್ತಲೇ ಕಾಲಕಳೆದರು ಎಂದು ಟೀಕಿಸಿದರು.

ಹೊಸ ಕನಸು ಕಟ್ಟಿಕೊಂಡು ಬಾಗಲಕೋಟೆ ಜಿಲ್ಲೆಯಲ್ಲಿ ಹೊಸ ಅಧ್ಯಾಯ ಆರಂಭದ ಆಶಯ ಹೊಂದಿದ್ದೇನೆ. ರೈಲ್ವೆ ಯೋಜನೆಗಳ ಅನುಷ್ಠಾನ, ಕಳಸಾ ಬಂಡೂರಿ ನೀರಾವರಿ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತ, ಜವಳಿ ಪಾರ್ಕ್‌ ನಿರ್ಮಾಣ, ಕೈಗಾರಿಕೆಗಳ ಸ್ಥಾಪನೆಯ ಕನಸು ನನ್ನದು. ನಾಲ್ಕು ಅವಧಿಗೆ ಬಿಜೆಪಿಗೆ ಅವಕಾಶ ಕೊಟ್ಟಿದ್ದೀರಿ. ನನಗೆ ಒಂದು ಅವಕಾಶ ಕೊಟ್ಟು ನೀಡಿ. ನಿಮ್ಮ ಆಶಯಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ. ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗುತ್ತೇನೆ ಎಂದು ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂಜು  ಬರಗುಂಡಿ. ಟಿ.ಎಸ್‌. ಮೊಕಾಶಿ, ದಾನಮ್ಮ ಪಾಟೀಲ, ಬಿ.ಬಿ. ಸೂಳೀಕೇರಿ, ರಾಜು ಜವಳಿ, ಬಿ.ಎಸ್‌. ಹದ್ಲಿ, ಪಿ.ಕೆ. ಪಾಟೀಲ, ಶ್ರೀಕಾಂತ್‌‌ ಗುಡ್ಡದ, ಮಹೇಶ್‌ ತಾಳಂಪಲ್ಲಿ ಮತ್ತಿತರ ಮುಖಂಡರು ವೇದಿಕೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net