

ಕಲಬುರಗಿ: ನಗರದಲ್ಲಿ ಇತ್ತೀಚೆಗೆ ಬಂಜಾರ ಸಮಾಜದ ಕೆಲವರು ಸೇರಿ ಸಭೆ ನಡೆಸಿ, ಬಿಜೆಪಿ ಸಮಾಜದ ಪೂರ್ಣ ಬೆಂಬಲವಿದೆ ಎಂದು ಹೇಳಿಕೆ ನೀಡಿದ್ದು, ಸರಿಯಲ್ಲ. ಒಂದು ಪಕ್ಷಕ್ಕೆ ಇಡೀ ಸಮಾಜವನ್ನು ಮೀಸಲು ಇಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಅರವಿಂದ ಚವ್ಹಾಣ್ ಹೇಳಿದರು.
ಪ್ರಸ್ತುತ ಸಂಸದರಾಗಿರುವ ಡಾ.ಉಮೇಶ ಜಾಧವ್ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದರು. ಅವರನ್ನು ಡಾ.ಮಲ್ಲಿಕಾರ್ಜುನ ಖರ್ಗೆ, ದಿ.ಧರ್ಮಸಿಂಗ್ ಅವರು ರಾಜಕೀಯಕ್ಕೆ ತಂದು ಬೆಳೆಸಿದ್ದರು. ಆದರೆ ಕೆಲವು ಬಂಜಾರ ಮುಖಂಡರು ಮೋದಿ ಅವರನ್ನು ಹೊಗಳುವ ಭರದಲ್ಲಿ ಕಾಂಗ್ರೆಸ್ ಇತಿಹಾಸವನ್ನೇ ಮರೆತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕಾಂಗ್ರೆಸ್ ಪಕ್ಷದ ಬೆನ್ನಿಗೆ ಚೂರಿ ಹಾಕಿದ ಡಾ.ಜಾಧವ್ ಬಂಜಾರ ಸಮಾಜಕ್ಕೆ ಕಳಂಕವಾಗಿದ್ದಾರೆ. ಐದು ವರ್ಷ ಸಂಸದರಾಗಿ ಏನನ್ನೂ ಮಾಡಲಿಲ್ಲ. ಜಿಲ್ಲೆಯ ಬಂಜಾರ ಸಮುದಾಯವರಿಗೆ ಅವಕಾಶಗಳೇ ನೀಡಿಲ್ಲ. ಅವರ ಕುಟುಂಬದವರನ್ನೇ ಬೆಳೆಸಿದ್ದಾರೆ. ಸಮಾಜದ ಇತರರನ್ನು ಬೆಳೆಯಲು ಬಿಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಂಜಾರ ಸಮಾಜ ಒಂದು ಪಕ್ಷದ ಅಡಿಯಾಳು ಅಲ್ಲ. ವಿವಿಧ ಪಕ್ಷಗಳಲ್ಲಿ ಬಂಜಾರ ಸಮಾಜದವರಿದ್ದಾರೆ. ವಿನಾಕಾರಣ ಸಭೆ ನಡೆಸಿ ಇಡೀ ಸಮಾಜ ಬಿಜೆಪಿ ಜತೆಗಿದೆ ಎಂದು ಹೇಳುವುದು ಸರಿಯಲ್ಲ. ಆಯಾ ಪಕ್ಷದವರು ತಮ್ಮ ತಮ್ಮ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಾರೆ. ಸಮಾಜಕ್ಕೆ ಸೀಮಿತ ಮಾಡಬಾರದು ಎಂದರು.
ಪ್ರಮುಖರಾದ ನಾಮದೇವ ರಾಠೋಡ, ಭೀಮಸಿಂಗ್ ಚವ್ಹಾಣ್, ಚಂದು ಜಾಧವ್, ನಾರಾಯಣ ಪವಾರ, ಜಗದೀಶ ಚವ್ಹಾಣ್, ರವಿ ಜಾಧವ್, ಬಾಲರಾಜ ಚವ್ಹಾಣ್, ರಾಜು ಗೌಳಿ ಇತರರಿದ್ದರು.