

ರಾಮನಗರ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿಗರ ವಿರುದ್ಧ ಹರಿಹಾಯ್ದ ರಾಜ್ಯದ ಸಚಿವರು, ಬಿಜೆಪಿ ಆರೋಪಿಸಿದ ಮುಡಾ ಹಗರಣದ ಸುಳಿಯಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದಾರೆ.
ರಾಮನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನಾಂದೋಲನ ಕಾರ್ಯಕ್ರಮದಲ್ಲಿ ಪ್ರತಿ ಪಕ್ಷಗಳ ನಡೆಯನ್ನು ಅವರು ಖಂಡಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಗಾಜಿನಮನೆಯಲ್ಲಿದ್ದುಕೊಂಡು ಬೇರೆಯವರ ಮನೆಗೆ ಕಲ್ಲು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಬ್ರಹ್ಮಾಂಡ ಭ್ರಷ್ಟಾಚಾರದ ಪಿತಾಮಹರು ಬಿಜೆಪಿಯವರೇ ಹೊರತು, ಕಾಂಗ್ರೆಸ್ ಪಕ್ಷದವರಲ್ಲ. ಪಿಎಸ್‌ಐ ಹಗರಣ ಆದಾಗ ಮುಖ್ಯಮಂತ್ರಿಗಳು, ಗೃಹಮಂತ್ರಿಗಳಾಗಿದ್ದವರು ಯಾರು? ಈ ಹಗರಣ ನಡೆದದ್ದು ಸತ್ಯವಲ್ಲವೇ? ಯುವಕರ ಭವಿಷ್ಯ ನಾಶವಾಗಿದ್ದು ಸತ್ಯವಲ್ಲವೇ. ನಮ್ಮ ಜಿಲ್ಲೆಯ ಮೂವರು ಯವಕರು ಕೂಡ ಈ ಹಗರಣಕ್ಕೆ ಸಿಲುಕಿದ್ದು ಸತ್ಯವಲ್ಲವೇ? ಆಗ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದವರು ಗಂಡಸು ಅಲ್ಲವೇ? ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.
ಉತ್ತರಕ್ಕೆ ಕಾಯುತ್ತಿದ್ದೇನೆ : ನಾನು ಬಿಡದಿಯಲ್ಲಿ ಕೇಳಿರುವ ಪ್ರಶ್ನೆಗಳಿಗೆ ಕುಮಾರಸ್ವಾಮಿ ಉತ್ತರ ನೀಡುವುದಾಗಿ ಹೇಳಿದ್ದಾರೆ. ಅದಕ್ಕಾಗಿ ಕಾಯುತ್ತಿದ್ದೇನೆ. ಅವರ ಗಣಿಗಾರಿಕೆ, ಲೋಕಾಯುಕ್ತ ತನಿಖೆ, ರಾಜ್ಯಪಾಲರ ಬಳಿ ಇರುವ ಫೈಲ್ ಬಗ್ಗೆ ನಾನು ಮಾತನಾಡುವುದಿಲ್ಲ. ಅವರ ಕುಟುಂಬದ ಆಸ್ತಿ ಹಾಗೂ ಅವುಗಳ ಹಿನ್ನೆಲೆ ಬಗ್ಗೆ ಮಾತ್ರ ಉತ್ತರ ಕೊಡಲಿ ಎಂದು ಡಿಸಿಎಂ ಹೇಳಿದರು.
ದೇವೇಗೌಡರ ಕುಟುಂಬದಿಂದ ಭೂ ಕಬಳಿಕೆ? : ನಾವು ಅಡ್ಜೆಸ್ಟ್ಮೆಂಟ್ ಮಾಡಿಕೊಂಡು ಸರ್ಕಾರ ಮಾಡುತ್ತಿಲ್ಲ. ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ನಡೆಸಿದ್ದೇವೆ. ಸಿದ್ದರಾಮಯ್ಯ ಬಗ್ಗೆ ಒಂದು ಕಪ್ಪು ಚುಕ್ಕೆ ಇಲ್ಲ. ಕಾಂಗ್ರೆಸ್ ಸರ್ಕಾರ ಸಿಎಂ ಮಾಡಿದ್ದ ವೇಳೆ ತಾಜ್ ವೆಸ್ಟೆಂಡ್‌ನಲ್ಲಿ ಕೂತು ಏನು ಮಾಡುತ್ತಿದ್ರಿ ಎಂದು ಕುಮಾರಸ್ವಾಮಿ ಅವರನ್ನು ಕೃಷಿ ಸಚಿವ ಚಲುವರಾಯಸ್ವಾಮಿ ಮಾತಿನಲ್ಲೇ ತಿವಿದರು.
ರಾಮನಗರ ಜಿಲ್ಲೆ ಮಾಡಿದರೆ ಸಾಲದು, ಜಿಲ್ಲೆಗೆ ಏನು ಮಾಡಿದ್ದೀರಿ? ಇದಕ್ಕೆ ಉತ್ತರ ಕೊಡಿ. ಕೇವಲ ಗಾಳಿಯಲ್ಲಿ ಗುಂಡು ಹೊಡೆಯಬೇಡಿ ಎಂದ ಅವರು, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಭೂ ಕಬಳಿಕೆ ಮಾಡಿದೆ ಎಂದು ಆರೋಪಿಸಿದರು.
ಯಡಿಯೂರಪ್ಪ ಅವರನ್ನು ಈ ವಯಸ್ಸಿನಲ್ಲಿ ಪಾದಯಾತ್ರೆಗೆ ಕರೆದುಕೊಂಡು ಹೊರಟಿದ್ದೀರಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ವಿರುದ್ಧವೂ ಹರಿಹಾಯ್ದ ಚಲುವರಾಯಸ್ವಾಮಿ, ಯಡಿಯೂರಪ್ಪ ಜೈಲಿಗೆ ಹೋಗೋಹಾಗೆ ಮಾಡಿದ್ದು ಕುಮಾರಸ್ವಾಮಿ. 20 ತಿಂಗಳು ಮುಖ್ಯಮಂತ್ರಿ ಮಾಡಿದ್ದರೂ ನಿಮಗೆ ಸಿಎಂ ಸ್ಥಾನ ಬಿಟ್ಟು ಕೊಡದೆ ಹೋದರು. ಪಾದಯಾತ್ರೆಗೆ ಬೆಂಬಲ ಇಲ್ಲ ಎಂದು ಹೇಳಿ ಮತ್ತೆ ಜತೆಯಾಗಿ ಹೆಜ್ಜೆ ಹಾಕುತ್ತಿದ್ದಾರೆ. ಇದರಿಂದ ಎಚ್‌ಡಿಕೆ ಏನು ಎಂದು ನಿಮಗೆ ಗೊತ್ತಾಗುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಹಗರಣ ಮಾಡಿದವರಿಂದಲೇ ಪಾದಯಾತ್ರೆ : ಬಿಜೆಪಿಗರು ಮಾಡಿರುವ ಹಗರಣ ತನಿಖೆ ನಡೆದರೆ ಸಾಲು ಸಾಲು ಮಂದಿ ಜೈಲು ಸೇರುತ್ತಾರೆ. ಆದರೆ, ಹಗರಣ ಮಾಡಿದವರೇ ಈಗ ಪಾದಯಾತ್ರೆ ಮಾಡುವ ಮೂಲಕ ಪಾಪ ಪ್ರಾಯಶ್ಚಿತ್ತ ಯಾತ್ರೆ ಕೈಗೊಂಡಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವ್ಯಂಗವಾಡಿದರು.
ಭೋವಿ ನಿಗಮದಲ್ಲಿ 100 ಕೋಟಿ ರೂ. ಗೂ ಹೆಚ್ಚು ದುರ್ಬಳಕೆ, ಎಪಿಎಂಸಿ ಹಗರಣ, ದೇವರಾಜ ಅರಸು ಟ್ರಕ್ ಟರ್ಮಿನಲ್ ಹಗರಣ, ಗಂಗಾಕಲ್ಯಾಣ ಯೋಜನೆಯಲ್ಲಿ 430ಕೋಟಿ ರೂ. ಹಗರಣ, ಪ್ರವಾಸೋದ್ಯಮ, ಕಿಯೋನೆಕ್ಸ್‌ನಲ್ಲಿ 500 ಕೋಟಿ ರೂ. ಹಗರಣ, ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕೋಟಿ ರೂ. ಹಗರಣ, ಪಿಎಸ್‌ಐ ನೇಮಕಾತಿ ಹಗರಣ, ಪರುಶರಾಮ್ ಥೀಂ ಪಾರ್ಕ್, ಬಿಟ್ ಕಾಯಿನ್ ಹಗರಣ ಹೀಗೆ ಹಗರಣಗಳ ಸರಮಾಲೆಯೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ. ಆದರೆ, ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿಲ್ಲ. ಆದರೆ, ಈಗ ಮುಖ್ಯ ಕಾರ್ಯದರ್ಶಿ ವರದಿಯನ್ನು ನೋಡದೆಯೇ ರಾಜ್ಯಪಾಲರಿಂದ ನೋಟಿಸ್ ಬಂದಿದ್ದು, ಗವರ್ನರ್ ಹುದ್ದೆಯನ್ನೂ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ದಳ-ಕಮಲದಿಂದ ರಾಜ್ಯ ಹಾಳು : ಬಿಜೆಪಿ, ಜೆಡಿಎಸ್ ಸೇರಿ ಈ ರಾಜ್ಯವನ್ನು ಹಾಳು ಮಾಡಿ ಹೋಗಿದ್ದಾರೆ. ಇದನ್ನು ಸರಿಪಡಿಸುವ ಕೆಲಸ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಾಡುತ್ತಿದ್ದಾರೆ ಎಂದು ಸಚಿವ ಭೈರತಿ ಸುರೇಶ್ ಹೇಳಿದರು.
ಯಡಿಯೂರಪ್ಪ ಅವರನ್ನು ವೇದಿಕೆಯಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಪಾಠ ಹೇಳಿದ್ರೆ ಏನಾದ್ರೂ ಉಪಯೋಗ ಇದೆಯೇ? ಎಂದು ಪ್ರಶ್ನಿಸಿದ ಅವರು, ಕುಮಾರಸ್ವಾಮಿ ಅವರು ಯಾವ ಮಟ್ಟಕ್ಕೆ ಹೋಗಿ ಯಾರ ಬಗ್ಗೆ ಆದರೂ ಮಾತನಾಡುತ್ತಾರೆ. ಅವರ ಹೊಟ್ಟೆ ಉರಿಗೆ ನಾವು ಮದ್ದನ್ನು ಕೊಡಬೇಕು. ಕುಮಾರಸ್ವಾಮಿ ಬಗ್ಗೆ ಮಾತಾಡೋದಕ್ಕಿಂತ ಸುಮ್ಮನೆ ಇದ್ದರೆ ಒಳ್ಳೆಯದು.
ರಾಜಕೀಯ ನಿವೃತ್ತಿ : ಬಿಜೆಪಿ ನಾಯಕರು, ಅವರ ಸರ್ಕಾರದ ಅವಧಿಯಲ್ಲಿ ಬಡವರಿಗೆ ಒಂದೇ ಒಂದು ಮನೆ ನೀಡಿರುವುದನ್ನು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಹೊಂದುವುದಾಗಿ ವಸತಿ ಸಚಿವ ಜಮೀರ್ ಅಹಮದ್ ಸವಾಲು ಹಾಕಿದರು. ನಮ್ಮ ಸರ್ಕಾರ ರಾಜಕೀಯ ಲಾಭಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಬಡವರ ಅನುಕೂಲಕ್ಕಾಗಿ ತಂದಿದ್ದೇವೆ. 5 ಗ್ಯಾರಂಟಿಗಳ ಜತೆಗೆ 6ನೇ ಗ್ಯಾರಂಟಿ ವಸತಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಬಡವರ ಮನೆ ಕೊಡಲು 9 ಸಾವಿರ ಕೋಟಿ ರೂ. ಬೇಕು. ಈ ಬಗ್ಗೆ ಸಿಎಂ, ಡಿಸಿಎಂ ಜತೆ ಮಾತನಾಡಿ, ಜನವರಿಯಲ್ಲಿ 500 ಕೋಟಿ ರೂ. ಬಿಡುಗಡೆ ಮಾಡಿಸಿ 36000 ಮನೆಗಳನ್ನು ಕೊಟ್ಟಿದ್ದೇವೆ. ಇನ್ನೂ 30 ಸಾವಿರಕ್ಕೂ ಹೆಚ್ಚು ಮನೆಗಳನ್ನು ಜನರಿಗೆ ಕೊಡುತ್ತೇವೆ. ಬಿಜೆಪಿ ತನಗೆ ದೊರೆತ ಅಧಿಕಾರ ಅವಧಿಯಲ್ಲಿ ಒಂದೇ ಒಂದು ಮನೆ ಕೊಟ್ಟಿದ್ದರೆ ತೋರಿಸಲಿ ಎಂದು ಸವಾಲು ಹಾಕಿದರು.
ನಿಮ್ಮ ಎಲಿಜಿಬಿಲಿಟಿ ಏನು? : ಪ್ರಧಾನಿ ಮಗ ಸಿಎಂ ಆಗೋದು ದೊಡ್ಡ ವಿಷಯವಲ್ಲ, ಆದರೆ, ಡಿಕೆಶಿ 40 ವರ್ಷ ಕಷ್ಟ ಪಟ್ಟು ರೈತನ ಮಗನಾಗಿ ರಾಜಕಾರಣ ಮಾಡಿದ್ದಾರೆ. ಡಿಸಿಎಂ ಆಗಿದ್ದಾರೆ, ನಿಮ್ಮ ಸಮುದಾಯದ ವ್ಯಕ್ತಿ ಉಪಮುಖ್ಯಮಂತ್ರಿ ಆಗಿದ್ದಾರೆ. ಇದನ್ನು ಏಕೆ ಸಹಿಸುತ್ತಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಶಾಸಕ ಪ್ರದೀಪ್ ಈಶ್ವರ್ ಪ್ರಶ್ನೆ ಮಾಡಿದರು. ಆದರೆ, ನೀವು ಡಿ.ಕೆ.ಶಿವಕುಮಾರ್ ಅವರನ್ನು ಎಷ್ಟೇ ತಡೆಯಲು ಪ್ರಯತ್ನ ಪಟ್ಟರೂ ಅವರ ಕೂದಲನ್ನೂ ಮುಟ್ಟೋಕೆ ಸಾಧ್ಯವಿಲ್ಲ ಎಂದರು. ಇನ್ನು ವಿಜಯೇಂದ್ರ ಅವರಿಗೆ ಯಡಿಯೂರಪ್ಪನವರ ಮಗ ಅನ್ನೋ ಅರ್ಹತೆ ಬಿಟ್ಟು ಬೇರೆ ಏನಿದೆ ಎಂದು ಪ್ರಶ್ನಿಸಿದರು.
ಸಚಿವರಾದ ಡಾ ಎಂ ಸಿ ಸುಧಾಕರ್, ರಹೀಂ ಖಾನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ, ಶಾಸಕರಾದ ಎಚ್.ಸಿ. ಬಾಲಕೃಷ್ಣ, ಆನೇಕಲ್ ಶಿವಣ್ಣ, ಇಕ್ಬಾಲ್ ಹುಸೇನ್, ರಿಜ್ವಾನ್ ಅರ್ಷದ್, ಕೊತ್ತೂರು ಮಂಜುನಾಥ್, ಮಾಜಿ ಸಂಸದ ಡಿ.ಕೆ ಸುರೇಶ್, ಎಂಎಲ್ಸಿಗಳಾದ ಸುಧಾಮ್ ದಾಸ್, ಯು.ಬಿ ವೆಂಕಟೇಶ್, ಪುಟ್ಟಣ್ಣ, ಎಸ್. ರವಿ, ನಸೀರ್ ಅಹ್ಮದ್, ರಾಮೋಜಿಗೌಡ, ಹಿರಿಯ ನಾಯಕರಾದ ಸಿ.ಎಂ. ಲಿಂಗಪ್ಪ, ಪ್ರಕಾಶ್ ರಾಥೋಡ್ ಮತ್ತಿತರರು ಉಪಸ್ಥಿತರಿದ್ದರು.