

ಬಾಗಲಕೋಟೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಿಂದುತ್ವದ ಪರವಾಗಿ ಆಡಳಿತ ನಡೆಸುತ್ತಿಲ್ಲ. ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದರು ಯಾರೊಬ್ಬರ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಪ್ರಧಾನ ಕಾರ್ಯದರ್ಶಿ ಅಯ್ಯನಗೌಡ ಹೇರೂರ ಆಕ್ರೋಶ ವ್ಯಕ್ತಪಡಿಸಿದರು.
ಕೆರೂರ ಘಟನೆ ಇದಕ್ಕೆ ಸಾಕ್ಷಿ. ಗಣೇಶ ವಿಸರ್ಜನೆ ಸಂದರ್ಭದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರನ್ನು ವಿನಾಕಾರಣ ಬಂಧಿಸಿ ಚಿತ್ರಹಿಂಸೆ ನೀಡಿದ ಪ್ರಕರಣದಲ್ಲಿ ತಪ್ಪಿತಸ್ಥ ಅಽಕಾರಿಗಳನ್ನು ವಜಾಗೊಳಿಸಲು ಆಗ್ರಹಿಸಿ ಕೆರೂರು ಚಲೋ ನಡೆಸಲಾಗಿತ್ತು. ಅಲ್ಲಿ ನೀಡಿದ ಗಡುವಿಗೂ ಸರ್ಕಾರ ಸ್ಪಂದಿಸದ ಕಾರಣ ಜಿಲ್ಲಾಡಳಿತ ಭವನದ ಎದುರು ದಸರಾ ಹಬ್ಬದ ನಂತರ ಅನಿರ್ದಿಷ್ಟಾವಽ ಧರಣಿ ಆರಂಭಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ನಾವು ಸಂಘಟನೆಯವರು ಎಂದಿಗೂ ನಮ್ಮ ಸರ್ಕಾರ ಎಂದು ಓಡಾಡಿಲ್ಲ. ಆದರೆ ಸರ್ಕಾರದಲ್ಲಿದ್ದವರು ತಾವು ಹಿಂದುತ್ವದ ಪರ ಎಂದು ಹೇಳಿಕೊಳ್ಳುತ್ತಾರೆ. ಅದೇ ಸರ್ಕಾರ ಹಿಂದೂ ಕಾರ್ಯಕರ್ತರ ಮೇಲೆ ಅನಗತ್ಯ ದಬ್ಬಾಳಿಕೆ ನಡೆಸಿದವರ ವಿರುದ್ಧ ಕ್ರಮಕ್ಕೆ ಹಿಂದೇಟು ಹಾಕುತ್ತಾರೆ. ಸಿದ್ದರಾಮಯ್ಯ ಅಣತಿಯಂತೆ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಶರಣಬಸು ಸಜ್ಜನ ಸೇರಿ ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸಿರುವ ಡಿವೈಎಸ್‌ಪಿ ಪ್ರಶಾಂತ ಮುನೋಳಿ, ಸಿಪಿಐ ಕರಿಯಪ್ಪ ಬನ್ನಿ, ಬಾದಾಮಿ, ಗುಳೇದಗುಡ್ಡ, ಕೆರೂರು ಪಿಎಸ್‌ಐಗಳ ಮೇಲೆ ಕ್ರಮಕ್ಕೆ ಸರ್ಕಾರ ಮುಂದಾಗದಿದ್ದರೆ ಅ.೬ರ ನಂತರ ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಆಹೋರಾತ್ರಿ ಧರಣಿ ಆರಂಭಗೊಳ್ಳುತ್ತದೆ. ದಿನಕ್ಕೊಂದು ತಾಲೂಕಿನ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಅದಕ್ಕೂ ಜಗ್ಗದಿದ್ದಾಗ ಶಾಸಕರ ಮನೆಗಳಿಗೆ ಮುತ್ತಿಗೆ ಹಾಕಲಾಗುತ್ತದೆ. ನಂತರ ಹೋರಾಟ ರಾಜ್ಯವ್ಯಾಪಿ ವಿಸ್ತರಣೆಗೊಳ್ಳಲಿದ್ದು, ಗೃಹಮಂತ್ರಿ, ಮುಖ್ಯಮಂತ್ರಿಗಳ ಮನೆಗಳಿಗೂ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.
ಹಿಂಜಾವೇ ಜಿಲ್ಲಾಧ್ಯಕ್ಷ ಆನಂದ ಮುತ್ತಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಗೌಡ ವಜ್ಜಲ, ಕಾರ್ಯದರ್ಶಿ ಅರುಣ ಕಟ್ಟಿಮನಿ, ಕುಮಾರಸ್ವಾಮಿ ಹಿರೇಮಠ ವೇದಿಕೆಯಲ್ಲಿದ್ದರು.