

ಬಾಗಲಕೋಟೆ: ಮತಗಳಲ್ಲಿ ಗೆದ್ದು ಬಿಡುತ್ತೇವೆ ಎಂದು ಸಮಾಧಾನವಾಗಬಾರದು ಕೊನೆಯ ಮತ ಕೂಡ ಬಿಜೆಪಿಗೆ ಬರಬೇಕು. ಭಾರತೀಯ ಜನತಾ ಪಕ್ಷ ಕೇವಲ ಬಹುಮತಕ್ಕೆ ಓಡಾಡುವ ಪಕ್ಷವಲ್ಲ. ಸರ್ವಮತಕ್ಕೆ ಪ್ರಯತ್ನ ಮಾಡುವ ಪಕ್ಷವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಹೇಳಿದರು.
ನಗರದ ಮುಚಖಂಡಿ ಕ್ರಾಸ್ ಬಳಿ ವಾರ್ಡ್ ನಂ.೧೮ರ ಬೂತ ನಂ ೯೭ ರಲ್ಲಿ ಭಾನುವಾರ ಪ್ರಮುಖರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಾಶೀ, ಅಯೋದ್ಯೆ, ಕೇದಾರ ಹೀಗೆ ಧಾರ್ಮಿಕ ಕ್ಷೇತ್ರಗಳ ನೀವು ಕಲ್ಪನೆ ಮಾಡಿಕೊಳ್ಳದಷ್ಟು ಅಭಿವೃದ್ಧಿ ಹೊಂದಿವೆ. ಧರ್ಮ ಸಂಸ್ಕೃತಿಗಾಗಿ ಕೆಲಸ ಮಾಡುವ ಪಕ್ಷವಾಗಿದೆ. ಹೀಗಾಗಿ ಸರ್ವ ಮತಗಳು ಬರುವಂತೆ ಮಾಡುವ ಮೂಲಕ ನಮ್ಮ ಪಕ್ಷದ ಶಾಸಕರನ್ನು ಗೆಲ್ಲಿಸಿಕೊಡುವ ಕಾರ್ಯ ಕಾರ್ಯಕರ್ತರು ಮಾಡಬೇಕು ಎಂದರು.
ಅಭಿಯಾನದ ಸಂದರ್ಭದಲ್ಲಿ ಮನೆಗಳಿಗೆ ಸಂಪರ್ಕ ಮಾಡಬೇಕು. ಪಕ್ಷದ ಸ್ಟಿಕರ್ ಮನೆ, ವಾಹನಗಳಿಗೆ ಅಂಟಿಸಬೇಕು. ಸಮ್ಮನೇ ಒತ್ತಾಯ ಪೂರ್ವಕವಾಗಿ ಸ್ಟೀಕರ್ ಅಂಟಿಸಬಾರದು. ಸಂಬಂಧಪಟ್ಟವರ ಗಮನಕ್ಕೆ ತಂದು ಅಂಟಿಸಬೇಕು. ಪಕ್ಷದ ಚಿಹ್ನೆಯನ್ನು ಗೋಡೆಗೆ ಬರೆಯಬೇಕು. ಪ್ರತಿಯೊಂದು ಮನೆಗೆ ಸಂಪರ್ಕಕ್ಕೆ ಹೋದಾಗ ಪಕ್ಷದ ಕುರಿತು ಮನವರಿಕೆ ಮಾಡಿಕೊಡುವ ಕೆಲಸವನ್ನು ಕಾರ್ಯಕರ್ತರು, ಬೂತ್ ಸಮಿತಿ ಪ್ರಮುಖರು ಮಾಡಬೇಕು ಎಂದು ಕರೆ ನೀಡಿದರು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಂಸದ ಪಿ.ಸಿ.ಗದ್ದಿಗೌಡರ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಇನ್ನಿತರರು ಇದ್ದರು. ವಾರ್ಡ್ ನಂ.೧೮ರಲ್ಲಿಯ ಬೂತ್ ಸಂಖ್ಯೆ ೯೭ ರಲ್ಲಿ ಪ್ರಧಾನಿಯವರ ಮನ್‌ಕೀ ಬಾತ್ ಕಾರ್ಯಕ್ರಮವನ್ನು ವೀಕ್ಷಿಸಿದರು. ಇದಕ್ಕೂ ಮುಂಚೆ ಬೂತ್ ಸಮಿತಿ ಸದಸ್ಯರ ಮನೆಯ ಗೋಡೆಗೆ ಪೇಂಟ್‌ದಿಂದ ಬಿಜೆಪಿ ಚಿಹ್ನೆಯನ್ನು ಬರೆದರು.