

ಸಕಲೇಶಪುರ: ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ತಾಲೂಕು ಬಿಜೆಪಿ ವತಿಯಿಂದ ಹರ್ ಘರ್ ತಿರಂಗಾ ಅಭಿಯಾನ ಹಿನ್ನೆಲೆಯಲ್ಲಿ ಗುರುವಾರ ತಾಲೂಕು ಬಿಜೆಪಿ ಯುವ ಮೋರ್ಚಾ ವತಿಯಿಂದ ಬೈಕ್ ರ‌್ಯಾಲಿ ಆಯೋಜಿಸಲಾಗಿತ್ತು.
ತಾಲೂಕು ಯುವ ಮೋರ್ಚಾ ಅಧ್ಯಕ್ಷ ನಿಖಿಲ್ ಹಲಸುಲಿಗೆ ಮಾತನಾಡಿ, ದೇಶದ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಬೆಳೆಸಿಕೊಳ್ಳಬೇಕು. 70 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದ ಕಾಂಗ್ರೆಸ್ಸಿಗರು ಕಾಶ್ಮೀರಕ್ಕೆ ಪ್ರತ್ಯೇಕ ಕಾನೂನು ಮಾಡಿ ಭಾರತವನ್ನು ವಿಭಜಿಸಿದ್ದರು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ತೆರವುಗೊಳಿಸಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತವನ್ನು ಒಗ್ಗೂಡಿಸಿದರು. ಈ ನಿಟ್ಟಿನಲ್ಲಿ ತಿರಂಗಾ ಧ್ವಜವನ್ನು ಹಿಡಿದು ಪಟ್ಟಣದ ಹೇಮಾವತಿ ಸೇತುವೆಯಿಂದ ಕೆಂಪೇಗೌಡ ಪ್ರತಿಮೆವರೆಗೆ ಬೈಕ್ ರ‌್ಯಾಲಿ ಹಾಗೂ ವೀರ ಯೋಧ ಎ.ಕೆ.ಸಾಗರ್ ಪ್ರತಿಮೆ ಆವರಣವನ್ನು ಸ್ವಚ್ಛ ಮಾಡಲಾಗಿದೆ ಎಂದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಧು ಬೊಮ್ಮನಕೆರೆ ಮಾತನಾಡಿ, ಭಾರತೀಯ ಸೇನೆ ಆಪರೇಷನ್ ಸಿಂಧೂರ ಮತ್ತು ಮಹದೇವ್ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಕಾರಣ ಬಿಜೆಪಿಯಿಂದ ಬೈಕ್ ರ‌್ಯಾಲಿ, ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದರೆ, ದೇಶದೊಳಗಿನ ಕೆಲ ರಾಜಕೀಯ ವ್ಯಕ್ತಿಗಳು ಭಾರತೀಯ ಸೈನ್ಯ ಮತ್ತು ಸೈನಿಕರಿಗೆ ಅಪಮಾನಗೊಳಿಸುವ ಮಾತನ್ನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಬಬಿತಾ ವಿಶ್ವನಾಥ್, ತಾಲೂಕು ಬಿಜೆಪಿ ಅಧ್ಯಕ್ಷ ವಳಲಹಳ್ಳಿ ಅಶ್ವತ್ಥ್, ಉಪಾಧ್ಯಕ್ಷ ಜಯಪ್ರಕಾಶ್ ದೊಡ್ಡದೀಣೆ, ಪ್ರತಿಭಾ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಅಗ್ನಿ ಸೋಮಶೇಖರ್, ನಗರ ಘಟಕದ ಅಧ್ಯಕ್ಷ ಲೋಕೇಶ್, ಬಿಜೆಪಿ ಅಲ್ಪಸಂಖ್ಯಾತ ಘಟಕದ ಆನಂದ್ ಲಿಯೋ, ಪರಿಶಿಷ್ಟ ಜಾತಿ/ಪ.ಪಂಗಡದ ಸ್ಟೀವನ್ ಪ್ರಕಾಶ್, ಬಿಜೆಪಿ ಮಂಡಲ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.