

ಹಾವೇರಿ: ತೀವ್ರ ಕುತೂಹಲ ಕೆರಳಿಸಿದ್ದ ಸ್ಥಳೀಯ ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಹಾವೇರಿ ಅಧ್ಯಕ್ಷರಾಗಿ ಆಯ್ಕೆಯಾದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಣ್ಣಪ್ಪ ಮಾಳಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಒಟ್ಟು 16 ಸದಸ್ಯ ಬಲದ ಎಪಿಎಂಸಿಯಲ್ಲಿ ಬಿಜೆಪಿ ಬೆಂಬಲಿತ 11 ಹಾಗೂ ಕಾಂಗ್ರೆಸ್ ಬೆಂಬಲಿತ 5 ಸದಸ್ಯರಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಬಹುಮತವಿಲ್ಲದ ಕಾರಣ ತನ್ನ ಬೆಂಬಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿ ವಿಳಂಬ ಮಾಡಿದ್ದರಿಂದ ಬಿಜೆಪಿ ಬೆಂಬಲಿತ ಕೆಲ ಸದಸ್ಯರು ಹಾಗೂ ಕಾಂಗ್ರೆಸ್ ಸದಸ್ಯರನ್ನು ವಿಶ್ವಾಸಕ್ಕೆ ಪಡೆದಿದ್ದ ಮಲ್ಲಿಕಾರ್ಜುನ ಹಾವೇರಿ ಕಣಕ್ಕಿಳಿದಿದ್ದರು. ಇವರ ವಿರುದ್ಧ ಬಿಜೆಪಿ ತನ್ನ ಬೆಂಬಲಿತ ಅಭ್ಯರ್ಥಿಯನ್ನಾಗಿ ರುದ್ರೇಶ ಚಿನ್ನಣ್ಣವರ ಅವರನ್ನು ಕಣಕ್ಕಿಳಿಸಿತ್ತು. ಚುನಾವಣೆಯಲ್ಲಿ ಮಲ್ಲಿಕಾರ್ಜುನ ಹಾವೇರಿ 8 ಮತಗಳನ್ನು ಪಡೆದರೆ, ರುದ್ರೇಶ ಚಿನ್ನಣ್ಣನವರ 7 ಮತಗಳಿಸಿ ಪರಾಭವಗೊಂಡರು. ಒಟ್ಟು 15 ಮತಗಳು ಚಲಾವಣೆಗೊಂಡಿದ್ದವು. ಬಿಜೆಪಿ ಬೆಂಬಲಿತ ಸದಸ್ಯ ಚನ್ನಬಸಪ್ಪ ಕೋಡಿಹಳ್ಳಿ ಸಭೆಗೆ ಗೈರಾಗಿದ್ದರು.
ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸಣ್ಣಪ್ಪ ಮಾಳಿ, ಮಲ್ಲಿಕಾರ್ಜುನ ಹಾವೇರಿ ಗುಂಪಿನೊಂದಿಗೆ ಗುರುತಿಸಿಕೊಂಡಿದ್ದ ಶಿದ್ದವ್ವ ಮುದಿಗೌಡ್ರ ಸ್ಪರ್ಧಿಸಿದ್ದರು. ಇದರಲ್ಲಿ ಸಣ್ಣಪ್ಪ ಮಾಳಿ 9 ಮತಗಳಿಸಿ ಆಯ್ಕೆಯಾದರು. ಶಿದ್ದವ್ವ ಮುದಿಗೌಡ್ರ 6 ಮತಗಳಿಸಿ ಸೋಲುಕಂಡರು.
ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಶಂಕರ ಜಿ.ಎಸ್. ಕಾರ್ಯನಿರ್ವಹಿಸಿದರು. ಎಪಿಎಂಸಿ ಕಾರ್ಯದರ್ಶಿ ಪರಮೇಶ್ವರ ನಾಯ್ಕ, ಸಹಕಾರ್ಯದರ್ಶಿ ಮನೋಹರ ರ್ಬಾ, ಉಪಾಧ್ಯಕ್ಷ ಸಣ್ಣಪ್ಪ ಮಾಳಿ, ಸದಸ್ಯರಾದ ರಮೇಶ ಚಾವಡಿ, ರಾಮು ಮಾಳಗಿ, ಶೇಖರಗೌಡ ಗಾಜಿಗೌಡ್ರ, ಮಲ್ಲಣ್ಣ ಸಾತೇನಹಳ್ಳಿ ಇತರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿದರು.
ಜಿದ್ದಾಜಿದ್ದಿನ ಪೈಪೋಟಿ: ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನೇ ಆಯ್ಕೆಗೊಳಿಸಬೇಕು. ಬಂಡಾಯ ಅಭ್ಯರ್ಥಿಯನ್ನು ಸೋಲುಣಿಸಬೇಕು ಎಂದು ಶಾಸಕರಾದ ನೆಹರು ಓಲೇಕಾರ ಹಾಗೂ ವಿರೂಪಾಕ್ಷಪ್ಪ ಬಳ್ಳಾರಿ ತೀವ್ರ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಹೀಗಾಗಿ ಇಬ್ಬರು ಶಾಸಕರು ಬೆಳಗ್ಗೆಯಿಂದ ಪಕ್ಷದಿಂದ ಬಂಡೆದ್ದ ಸದಸ್ಯರನ್ನು ಸೆಳೆಯಲು ನಾನಾ ಪ್ರಯತ್ನ ನಡೆಸಿದ್ದರು. ಸ್ಥಳೀಯವಾಗಿಯೇ ಇದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಜಿಲ್ಲಾಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಆರ್ಡಿ ಲ್ಯಾಬ್ ಉದ್ಘಾಟನಾ ಕಾರ್ಯಕ್ರಮಕ್ಕೂ ಗೈರಾಗಿದ್ದರು. ಎಪಿಎಂಸಿ ಆವರಣದಲ್ಲಿಯೇ ಠಿಕಾಣಿ ಹೂಡಿದ್ದರು. ಆದರೂ ಅಧ್ಯಕ್ಷ ಸ್ಥಾನ ಕೈತಪ್ಪಿ, ಉಪಾಧ್ಯಕ್ಷ ಸ್ಥಾನ ಮಾತ್ರ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಒಲಿಯಿತು.
ಎಪಿಎಂಸಿಯ ಮೊದಲ ಅವಧಿಯಲ್ಲಿ ಅಧ್ಯಕ್ಷನಾಗಿದ್ದ ಸಮಯದಲ್ಲಿ ಮಾಡಿದ್ದ ಅಭಿವೃದ್ಧಿ ಕಾರ್ಯಗಳಿಗೆ ಎಪಿಎಂಸಿಯ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರು ಇನ್ನೊಂದು ಅವಧಿಗೆ ಅಧ್ಯಕ್ಷರಾಗುವಂತೆ ಸಲಹೆ ನೀಡಿ ಬೆಂಬಲ ವ್ಯಕ್ತಪಡಿಸಿದ್ದರು. ಅದರಂತೆ ಸದಸ್ಯರು ಪಕ್ಷಾತೀತವಾಗಿ ಸಹಕಾರ ನೀಡಿ ಮತ್ತೊಮ್ಮೆ ಅಧ್ಯಕ್ಷನಾಗಲು ಶ್ರಮಿಸಿದ್ದಾರೆ. ಸದಸ್ಯರ ವಿಶ್ವಾಸದಂತೆ ಮುಂದಿನ 20 ತಿಂಗಳ ಅವಧಿಯಲ್ಲಿ ಎಪಿಎಂಸಿಯ ಅಭಿವೃದ್ಧಿಗೆ ಶ್ರಮಿಸುತ್ತೇನೆ. | ಮಲ್ಲಿಕಾರ್ಜುನ ಹಾವೇರಿ, ಎಪಿಎಂಸಿ ನೂನತ ಅಧ್ಯಕ್ಷ