

ಕಲಬುರಗಿ: ಬಿಜೆಪಿ, ಜೆಡಿಎಸ್‌ಗಳಿಗೆ ಮುಳುಗಿ ಹೋಗುವ ಭಯ ಕಾಡುತ್ತಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಲೇವಡಿ ಮಾಡಿದರು. ಬಿಜೆಪಿಗೆ ಜೆಡಿಎಸ್ ಮತ್ತು ಜೆಡಿಎಸ್‌ಗೆ ಬಿಜೆಪಿ ಅನಿವಾರ್ಯವಾಗಿದ್ದು, ಎರಡೂ ಪಕ್ಷಗಳು ಮುಳುಗುವ ಭಯದಲ್ಲಿವೆ. ಹೀಗಾಗಿ ಪರಸ್ಪರ ಕೈಜೋಡಿಸಿವೆ. ಕುಮಾರಸ್ವಾಮಿ ನಡವಳಿಕೆಯಿಂದಲೇ ಈ ದುಸ್ಥಿತಿ ಬಂದಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.
ಜನವರಿಯಲ್ಲಿ ಸರ್ಕಾರ ಉರುಳಲಿದೆ ಎಂಬ ಯೋಗೇಶ್ವರ್ ಹೇಳಿಕೆಗೆ, ತನ್ನ ಹಣೆಬರಹವೇ ಬರೆದುಕೊಳ್ಳಲು ಆಗಿಲ್ಲ. ಬೇರೆಯವರ ಹಣೆಬರಹ ಬರೆಯುತ್ತಾನಾ? ಸ್ವತಃ ಪ್ರಧಾನಿ ಮೋದಿ ಬಂದು ಪ್ರಚಾರ ಮಾಡಿದ್ರೂ ಸೋತಿದ್ದೇನೆ. ಯೋಗೇಶ್ವರ್, ಕುಮಾರಸ್ವಾಮಿಗೆ ಕಾಂಗ್ರೆಸ್ ಹಣೆಬರಹ ಬರೆಯಲು ಸಾಧ್ಯವಿಲ್ಲ ಎಂದು ಗುಡುಗಿದರು.
ಕುಮಾರಸ್ವಾಮಿ ಅವರು ದೇವೇಗೌಡರನ್ನೇ ಬಲವಂತ ಮಾಡಿ ಮೈತ್ರಿಗೆ ಒಪ್ಪಿಸಿದ್ದಾರೆ. ಬೆಂಬಲ ಕೊಟ್ಟವರು, ಸಹಾಯ ಮಾಡಿದವರ ಬಗ್ಗೆ ಕುಮಾರಸ್ವಾಮಿ ಲಘುವಾಗಿ ಮಾತನಾಡಬಾರದು. ಸರ್ಕಾರ ಬೀಳುತ್ತದೆ ಎನ್ನುವ ಬಿಜೆಪಿ, ಜೆಡಿಎಸ್ ನಾಯಕರು ಕಾಯ್ತಾ ಇರಲಿ ಎಂದು ಛೇಡಿಸಿದರು.