ಬಿಕ್ಕೋಡು ಆಟೋ ಚಾಲಕರ ಪ್ರತಿಭಟನೆ

20blrp3
Published on

ಬೇಲೂರು: ಸುಮಾರು 25 ವರ್ಷಗಳಿಂದ ಇದ್ದ ಆಟೋ ನಿಲ್ದಾಣವನ್ನು ರಾತ್ರೋರಾತ್ರಿ ತೆರವುಗೊಳಿಸಿ ಕೆಲವರು ವಾಣಿಜ್ಯ ಮಳಿಗೆ ನಿರ್ಮಿಸಿ ಸರ್ಕಾರಿ ಜಾಗ ಕಬಳಿಸಲು ಮುಂದಾಗಿರುವುದನ್ನು ತಡೆಗಟ್ಟುವಂತೆ ಆಗ್ರಹಿಸಿ ಬಿಕ್ಕೋಡಿನ ಆಟೋ ಚಾಲಕರು ಮತ್ತು ಗ್ರಾಮಸ್ಥರು ತಾಲೂಕು ಕಚೇರಿ ಮುಂದೆ ಗುರುವಾರ ಪ್ರತಿಭಟಿಸಿದರು.

ತಾಲೂಕು ಕೆಡಿಪಿ ಸದಸ್ಯ ಹಾಗೂ ಬಿಕ್ಕೋಡು ಗ್ರಾಮದ ಮುಖಂಡ ಚೇತನ್.ಸಿ.ಗೌಡ ಮಾತನಾಡಿ, ತಾಲೂಕಿನ ಬಿಕ್ಕೋಡು ಗ್ರಾಮದ ಮುಖ್ಯರಸ್ತೆಯಲ್ಲಿರುವ ಸರ್ವೇ ನಂ.34 ರಲ್ಲಿ ಗೋಮಾಳಕ್ಕೆ ಸೇರಿದ 8 ಎಕರೆ 30 ಗುಂಟೆ ಜಾಗವಿತ್ತು. ಆ ಜಾಗದಲ್ಲಿ ಗಣಪತಿ ದೇವಾಲಯ ಕಟ್ಟಿ ಸುತ್ತಲೂ ಕಾಂಪೌಂಡ್ ನಿರ್ಮಿಸಲಾಗಿದೆ. ಅದರ ಪಕ್ಕದಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗದಲ್ಲೇ 25 ವರ್ಷಗಳಿಂದ ಮಲೆನಾಡು ಆಟೋ ಚಾಲಕರ ಸಂಘದ ಹೆಸರಿನಲ್ಲಿ ದಾನಿಗಳ ಸಹಾಯದಿಂದ ನಿಲ್ದಾಣ ನಿರ್ಮಿಸಿ, ಸಂಘ ನೋಂದಣಿ ಮಾಡಿಸಿದ್ದಾರೆ. ಆದರೆ, ಇಲ್ಲಿ ಕೆಲವರು ರಾತ್ರೋ ರಾತ್ರಿ ಆಟೋ ನಿಲ್ದಾಣ ತೆರವುಗೊಳಿಸಿ ಯಾವುದೇ ಅನುಮತಿ ಇಲ್ಲದೆ ವಾಣಿಜ್ಯ ಮಳಿಗೆ ನಿರ್ಮಿಸುತ್ತಿದ್ದಾರೆ. ಈ ವಿಚಾರವಾಗಿ ಗ್ರಾಮ ಪಂಚಾಯಿತಿ, ಲೋಕೋಪಯೋಗಿ ಇಲಾಖೆಗೆ ಅಧಿಕಾರಿಗಳಿಗೆ ದಾಖಲೆ ಸಮೇತ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಸ್ಥಳದಲ್ಲಿ ಮಳಿಗೆ ಕಾಮಗಾರಿ ನಡೆಯುತ್ತಿದ್ದು ತಕ್ಷಣ ಸಾರ್ವಜನಿಕರ ಸೇವೆಗೆ ಮೀಸಲಿಡುವಂತೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದು, ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಬಿಕ್ಕೋಡಿನಲ್ಲಿ ರಸ್ತೆ ತಡೆ ಮೂಲಕ ಗ್ರಾಮಸ್ಥರೊಂದಿಗೆ ಪ್ರತಿಭಟಿಸಬೇಕಾಗುತ್ತದೆ ಎಂದರು.

ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜು ಮಾತನಾಡಿ, ಯಾವುದೇ ಅನುಮತಿ ಪಡೆಯದೆ ಏಕಾಏಕಿ ಆಟೋ ನಿಲ್ದಾಣದ ನಾಮಫಲಕ ತೆರವುಗೊಳಿಸಿದ್ದಾರೆ. ಇಲ್ಲಿ ಅತಿಕ್ರಮಣವಾಗಿ ಮಳಿಗೆ ನಿರ್ಮಿಸುತ್ತಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಂಡು ಈ ಹಿಂದೆ ಇದ್ದ ಆಟೋ ನಿಲ್ದಾಣವನ್ನು ಉಳಿಸಿ ಕೊಡುವಂತೆ ಮನವಿ ಮಾಡಿದರು.

ಬಳಿಕ ಗ್ರೇಡ್-2 ತಹಸೀಲ್ದಾರ್ ಅಶೋಕ್ ಕುಮಾರ್‌ಗೆ ಮನವಿ ಸಲ್ಲಿಸಿದರು. ಆಟೋ ಚಾಲಕರ ಸಂಘದ ಉಪಾಧ್ಯಕ್ಷ ಕಾಂತರಾಜು, ಪುಟ್ಟರಾಜು, ಮಂಜೇಗೌಡ, ರವೀಶ್, ಅಭಿಷೇಕ್, ಚನ್ನಯ್ಯ, ಜಗದೀಶ್, ತೇಜು, ಶಿವಣ್ಣ, ಚನ್ನಕೇಶವ, ತಮ್ಮಯ್ಯ, ಧರ್ಮೇಶ್, ಕಿರಣ್, ಸತೀಶ್, ರಾಕೇಶ್, ಧರಣೇಶ್, ಲಕ್ಷ್ಮೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net