

ಶಿರಸಿ: ಬಿಎಸ್ 4 ಮಾಪನ ಹೊಂದಿರುವ ವಾಹನಗಳ ತಾತ್ಕಾಲಿಕ ನೋಂದಣಿ ಮಾಡಿಸಿಕೊಂಡವರು ಮಾರ್ಚ್ 31ರೊಳಗೆ ಕಾಯಂ ನೋಂದಣಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಅಂತಹ ವಾಹನಗಳನ್ನು ನಿಷೇಧಿಸುವ ಜತೆ ಮಾರಾಟ ಸ್ಥಗಿತಗೊಳಿಸಲಾಗುತ್ತದೆ ಎಂದು ಇಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ವಾಸಿಂ ಬಾಬಾ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಎಪ್ರಿಲ್ 1 ರಿಂದ ದೇಶಾದ್ಯಂತ ಬಿಎಸ್ 6 ಮಾಪನ ಹೊಂದಿರುವ ವಾಹನಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಈಗಾಗಲೆ ಚಾಲ್ತಿಯಲ್ಲಿರುವ ಬಿಎಸ್ 4 ಮಾಪನ ಹೊಂದಿರುವ ವಾಹನಗಳ ತಾತ್ಕಾಲಿಕ ನೋಂದಣಿ ಇರುವವರು ಮಾರ್ಚ್ 31ರೊಳಗೆ ಖಾಯಂ ನೋಂದಣಿ ಮಾಡಿಸಿಕೊಳ್ಳಬೇಕು. ಒಂದಾನು ವೇಳೆ ಕಾಯಂ ನೋಂದಣಿ ಮಾಡಿಸಿಕೊಳ್ಳದಿದ್ದರೆ ಅಂತಹ ವಾಹನಗಳ ಮಾರಾಟ ನಿಷೇಧಿಸುವುದಲ್ಲದೇ ಸ್ಕ್ರ್ಯಾಪ್ ಮಾಡಲಾಗುವುದು. ಕೂಡಲೇ ಸಾರ್ವಜನಿಕರು ತಮ್ಮ ವಾಹನಗಳ ಖಾಯಂ ನೋಂದಣಿ ಮಾಡಿಸಿಕೊಳ್ಳುವಂತೆ ಕರೆ ನೀಡಿದರು.
ನಾಲ್ಕು ತಾಲೂಕು ಹೊಂದಿರುವ ಶಿರಸಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ 2020ರ ಜನವರಿ 31ರ ವರೆಗೆ
1,30,689 ಲಕ್ಷ ದ್ವಿಚಕ್ರ ವಾಹನ, 10347 ಕಾರ್, 542 ಜೀಪ್, 2143 ಒಮ್ನಿ, 1840 ಟ್ರಾ್ಯಕ್ಟರ್, 1183 ಟ್ರೇಲರ್ಸ್, 159 ಗೂಡ್ಸ್ ವಾಹನಗಳಿವೆ. ಇದರಲ್ಲಿ 2019ರ ಏಪ್ರಿಲ್ 1ರಿಂದ ಈವರೆಗೆ 24039 ವಾಹನಗಳು ತಾತ್ಕಾಲಿಕ ನೊಂದಣಿಯಾಗಿವೆ. ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ 9428 ವಾಹನಗಳು ಕಾಯಂ ನೋಂದಣಿಯಾಗಿವೆ ಎಂದರು. ಪರಿಸರ ಸ್ನೇಹಿಯಾಗಿಸಲು ಬಿಎಸ್ 6 ಮಾಪನದ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಜೊತೆಗೆ ಸರ್ಕಾರ ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದರು.
ಈ ವೇಳೆ ಕಚೇರಿಯ ಅಧೀಕ್ಷಕ ಸುಬ್ರಹ್ಮಣ್ಯ ಹೆಗಡೆ ಉಪಸ್ಥಿತರಿದ್ದರು.
ಶಿರಸಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಮೋಟಾರು ವಾಹನ ನಿರೀಕ್ಷಕ, ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕ, ಟೈಪಿಸ್ಟ್ ಸೇರಿದಂತೆ ವಿವಿಧ ಹುದ್ದೆಗಳು ಖಾಲಿಯಿವೆ. ಆದರೂ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ. | ವಾಸೀಂ ಬಾಬಾ ಪ್ರಾದೇಶಿಕ ಸಾರಿಗೆ ಅಧಿಕಾರಿ