

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಕೇಂದ್ರದ ಸಿಆರ್‌ಐಎಫ್ ಯೋಜನೆಯಡಿಯಲ್ಲಿನ ಸರಪಳಿ ರಸ್ತೆ ಕಾಮಗಾರಿಗೆ ಸಂಸದ ಸುನೀಲ್ ಬೋಸ್ ಹಾಗೂ ಶಾಸಕ ಎ.ಆರ್.ಕೃಷ್ಣಮೂರ್ತಿ ಬುಧವಾರ ಚಾಲನೆ ನೀಡಿದರು.
ಸಂಸದ ಸುನೀಲ್ ಬೋಸ್ ಮಾತನಾಡಿ, ಬಿ.ಆರ್.ಹಿಲ್ಸ್ ರಸ್ತೆಯ ಸರಪಳಿ 69.60 ಕಿ.ಮೀ.ನಿಂದ 83 ಕಿ.ಮೀ.ವರೆಗಿನ ರಾಜ್ಯ ಹೆದ್ದಾರಿ 80ರ ನಂಜನಗೂಡು-ಬಿಳಿಗಿರಿರಂಗನಬೆಟ್ಟ ರಸ್ತೆ ಅಭಿವೃದ್ಧಿ ಕಾಮಗಾರಿಗೆ 2023-24ನೇ ಸಾಲಿನಲ್ಲಿ ಸಿಆರ್‌ಐಎಫ್ ಯೋಜನೆಯಡಿ ಅನುಮೋದನೆ ನೀಡಲಾಗಿತ್ತು. ಬಿಳಿಗಿರಿರಂಗನಬೆಟ್ಟದ ಗಂಗಾಧರೇಶ್ವರ ದೇಗುಲದಿಂದ ಕೆ.ಗುಡಿವರೆಗಿನ ರಸ್ತೆಯ ಮರು ಡಾಂಬರೀಕರಣಕ್ಕೆ ಈ ಅನುದಾನವನ್ನು ಬಳಸಿಕೊಳ್ಳಲಾಗುತ್ತಿದ್ದು, ಇದರಿಂದ ಇಲ್ಲಿಗೆ ಬರುವ ಪ್ರವಾಸಿಗರು ಹಾಗೂ ಭಕ್ತರಿಗೆ ಅನುಕೂಲವಾಗಲಿದೆ ಎಂದರು.
ಕೇಂದ್ರ ಪ್ರವಾಸೋದ್ಯಮ ಇಲಾಖೆ ವತಿಯಿಂದ ಅನುದಾನವನ್ನು ತಂದು ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸುತ್ತೇನೆ. ಇಲ್ಲಿರುವ ಸೋಲಿಗರು ಇಲ್ಲಿನ ಮೂಲ ನಿವಾಸಿಗಳಾಗಿದ್ದಾರೆ. ಅವರನ್ನು ಒಕ್ಕಲೆಬ್ಬಿಸುವ ಕೆಲಸವಾಗಬಾರದು, ಅರಣ್ಯ ಇಲಾಖೆಯವರು ಅವರಿಗೆ ತೊಂದರೆ ನೀಡಬಾರದು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಸಿದ್ದು ನಿವಾಸ್ ಯೋಜನೆಯಡಿಯಲ್ಲಿ ಗಿರಿಜನರಿಗೆ 3 ಸಾವಿರ ಮನೆಗಳು ಮಂಜೂರಾಗಿದ್ದು ಆದಷ್ಟು ಬೇಗ ಇದರ ಕಾಮಗಾರಿಗಳು ಆರಂಭವಾಗುತ್ತವೆ ಎಂದು ಮಾಹಿತಿ ನೀಡಿದರು.
ಜಮೀನು ಗೊಂದಲ ಸರಿಪಡಿಸಲು ಕ್ರಮ: ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ನಮ್ಮ ತಂದೆ ಬಿ.ರಾಚಯ್ಯ ಅವರ ಕಾಲದಲ್ಲಿ ಸೋಲಿಗರೂ ಸೇರಿದಂತೆ ಕಾಡಂಚಿನಲ್ಲಿ ಎಲ್ಲ ವರ್ಗದ ಜನರಿಗೂ ಕಂದಾಯ ಭೂಮಿಯನ್ನು ನೀಡಲಾಗಿತ್ತು. ಆದರೆ ನಂತರ ಅರಣ್ಯ ಇಲಾಖೆಯವರು ಅವರ ಜಮೀನನ್ನು ವಶಪಡಿಸಿಕೊಂಡಿದ್ದರು. ಅವರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಯಾರೊಬ್ಬ ಸಂಸದರಾಗಲಿ, ಶಾಸಕರಾಗಲಿ ಇತರ ಜನಪ್ರತಿನಿಧಿಗಳು ಇದುವರೆವಿಗೂ ಪ್ರಯತ್ನ ಪಡಲಿಲ್ಲ. ನಾನು ಅವರಿಗೆ ನ್ಯಾಯ ದೊರಕಿಸಿಕೊಡಲು ಕಟಿಬದ್ಧನಾಗಿದ್ದೇನೆ. ಅವರಿಗೆ ನೀಡಿರುವ ಭೂದಾಖಲೆಗಳು ಕೆಲವು ಕಾರಣಗಳಿಂದ ಕಳೆದುಹೋಗಿದ್ದು, ಅವರಿಗೆ ನ್ಯಾಯ ದೊರಕಿಸುವಲ್ಲಿ ನಾನು ಧ್ವನಿ ಎತ್ತಿದ್ದು ಎಲ್ಲರಿಗೂ ಆ ಕಾಲದಲ್ಲಿ ವಿತರಣೆಯಾಗಿದ್ದ ತಲಾ 4 ಎಕರೆ ಭೂಮಿಯನ್ನು ನೀಡಬೇಕು, ಇಲ್ಲವೇ ಇವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತೇನೆ. ಗಿರಿಜನರು ಕಾಡು ರಕ್ಷಕರಾಗಿದ್ದಾರೆ. ಅವರಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ಯಾವ ಕಾರಣಕ್ಕೂ ತೊಂದರೆ ನೀಡಬಾರದು ಎಂದು ಮನವರಿಕೆ ಮಾಡಿಕೊಟ್ಟರು.
ಬೆಟ್ಟದ ಅಭಿವೃದ್ಧಿಗೆ ಈಗಾಗಲೇ ಹಲವು ಯೋಜನೆಗಳನ್ನು ರೂಪಿಸಿದ್ದು, ಅನೇಕ ಕಾಮಗಾರಿಗಳು ಪ್ರಗತಿಯಲ್ಲಿದ್ದು ಇದನ್ನು ಇನ್ನಷ್ಟು ಆಕರ್ಷಣೀಯ ಮಾಡಿ, ಹೆಚ್ಚು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವಂತೆ ಮಾಡಲು ಕ್ರಮ ವಹಿಸಲಾಗುವುದು ಎಂದರು.
ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಗ್ರಾಪಂ ಅಧ್ಯಕ್ಷ ಸಿ.ಡಿ.ಮಹದೇವ ಉಪಾಧ್ಯಕ್ಷೆ ಕಮಲಮ್ಮ, ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜೆ. ಶ್ರೀನಿವಾಸ್, ಸದಸ್ಯರಾದ ಗುಂಬಳ್ಳಿ ರಾಜಣ್ಣ, ಕೇತಮ್ಮ, ಮುಖಂಡರಾದ ಮಾಂಬಳ್ಳಿ ನಂಜುಂಡಸ್ವಾಮಿ, ವೆಂಕಟೇಶ್, ಕಂದಹಳ್ಳಿ ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಎಇಇ ವಿಜಯಲಕ್ಷ್ಮಿ ಮತ್ತಿತರರು ಹಾಜರಿದ್ದರು.